ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಾಯಿ ಮಾಂಸ (Dog meat) ಮಾರಾಟ ಮಾಡಲಾಗ್ತಿದ್ಯಾ? ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಆರೋಪ ಬೆಂಗಳೂರಿನ ನಾನ್ ವೆಜ್ (Non-Veg) ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಜು.26 ರಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ತಡೆ ಹಿಡಿದಿದ್ದಾರೆ. ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರು ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಹಿಂದೂ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಜೈಪುರದಿಂದ ರೈಲು ಬಂದ ಕೂಡಲೇ ಮಾಂಸದ ಬಾಕ್ಸ್ ಗಳನ್ನು ತಡೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಜೈಪುರ ರೈಲಿನ ಮೇಲೆ ದಾಳಿ ಮಾಡಿ ಮಟನ್ ಮಾಂಸವನ್ನು ಎತ್ತಿ ನೋಡಿದ್ದು, ಅದರಲ್ಲಿ ನಾಯಿ ಮಾಂಸವಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದ ಸಹ ನಡೆದಿದೆ. ಈ ಕುರಿತು ಅಬ್ದುಲ್ ರಜಾಕ್ ಮಾತನಾಡಿ, ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡಲು ಬಂದಿದ್ದ. ಅದಕ್ಕೆ ಅವಕಾಶ ಕೊಡಲಿಲ್ಲವಾದ್ದರಿಂದ ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪ ಮಾಡುತ್ತಿದ್ದಾನೆ. ನಮ್ಮ ಬಳಿ ಅನುಮತಿ ಇದೆ, ಮಾಂಸ ಮಾರಲು ಪರಮಿಷನ್ ತೆಗೆದುಕೊಂಡಿದ್ದೇವೆ. ನಾವು ಈ ವ್ಯಾಪಾರವನ್ನು 12 ವರ್ಷದಿಂದ ಮಾಡುತ್ತಿದ್ದೇವೆ. ಅವರೇ ಬಾಕ್ಸ್ ತೆರೆದಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಜೈಪುರ ರೈಲಿನಲ್ಲಿ ಬೆಂಗಳೂರಿಗೆ ಒಟ್ಟು 90 ಮಾಂಸದ ಬಾಕ್ಸ್ ಗಳು ಬಂದಿದೆ. ಅದರಲ್ಲಿ ಒಟ್ಟು ನಾಲ್ಕೂವರೆ ಸಾವಿರ ಕೆಜಿ ಮಾಂಸವಿದೆ ಎನ್ನಲಾಗಿದೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ದೌಡಾಯಿಸಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಸೇರಿ ಮಾಂಸದ ಬಾಕ್ಸ್ ಗಳನ್ನು ತೆರೆದು ಪರಿಶೀಲನೆ ನಡೆಸಿದ್ದಾರೆ. ಗುಣಮಟ್ಟ ಹಾಗೂ ಮಾಂಸ ಯಾವುದು ಎಂದು ದೃಡೀಕರಣ ಮಾಡುವ ನಿಟ್ಟಿನಲ್ಲಿ ಸ್ಯಾಂಪಲ್ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.