Local News -ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ರವರನ್ನು ಗುಡಿಬಂಡೆ ಕಸಾಪ ಘಟಕ ಆಯ್ಕೆ ಸಮಿತಿಯಿಂದ ಆಯ್ಕೆಯಾಗಿದ್ದು, ಕಸಪಾ ಪದಾಧಿಕಾರಿಗಳು ಸಂಪ್ರದಾಯದಂತೆ ಆಹ್ವಾನ ನೀಡಿದರು.

ಈ ಸಂಬಂಧ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಸಮಿತಿಯಿಂದ ತಹಸೀಲ್ದಾರ್ ರವರಿಗೆ ಮುಚ್ಚಿದ ಲಕೋಟೆಯನ್ನು ನೀಡಲಾಗಿತ್ತು. ಬಳಿಕ ಲಕೋಟೆಯನ್ನು ತೆರೆದು ಬಿ.ಅಮೀರ್ ಜಾನ್ ರವರು ಸಮ್ಮೇಳದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ತಹಸೀಲ್ದಾರ್ ರವಿ ಹಾಗೂ ತಾ.ಪಂ ಇಒ ಹೇಮಾವತಿ ಘೋಷಣೆ ಮಾಡಿದರು.
ಈ ಸಮಯದಲ್ಲಿ ಪ್ರಭಾರಿ ತಹಸೀಲ್ದಾರ್ ರವರು ಮಾತನಾಡಿ, ಸಮ್ಮೇಳನದ ಆಚರಣೆಯ ನಿಮಿತ್ತ ಕಳೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅದರಂತೆ ಕಸಾಪ ಹಾಲಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಮ್ಮೇಳದ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಿದ್ದು, ಸಮಿತಿಯವರು ಉತ್ತಮವಾದ ಹಾಗೂ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. ಬಿ.ಅಮೀರ್ ಜಾನ್ ರವರು ನನಗೂ ಸಹ ಪಾಠ ಮಾಡಿದ ಗುರುಗಳು, ಅವರ ಆಯ್ಕೆ ಇಂದು ಅವರ ಶಿಷ್ಯಕೋಟಿಗೆ ಅತೀವ ಸಂತಸವನ್ನು ತಂದುಕೊಟ್ಟಿರುತ್ತದೆ ಎಂದು ಭಾವಿಸುತ್ತೇನೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಕನ್ನಡ ಪರ ಸೇವೆಯಲ್ಲೂ ಸಹ ತೊಡಗಿಸಿಕೊಂಡಿದ್ದ ಬಿ.ಅಮೀರ್ ಜಾನ್ ರವರು ಅಧ್ಯಕ್ಷರಾಗಿರುವುದು ಸಂತಸ ತಂದಿದೆ ಎಂದರು.

ಇದೇ ಸಮಯದಲ್ಲಿ ತಾ.ಪಂ ಇಒ ನಾಗಮಣಿ ಮಾತನಾಡಿ, ಗುಡಿಬಂಡೆ ಗಡಿ ಭಾಗದಲ್ಲಿದ್ದರೂ ಸಹ ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಹ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜೊತೆಗೆ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡುತ್ತಿರುತ್ತಾರೆ. ಇದೀಗ ಕನ್ನಡ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ಈ ಕಾರ್ಯಕ್ರಮ ಯಶಸ್ಸಿಗೆ ಕೈ ಜೋಡಿಸಬೇಕು. ಉತ್ತಮವಾದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನಕ್ಕೆ ಮತ್ತಷ್ಟು ಮೆರಗು ಬರುವಂತಾಗಿದೆ ಎಂದರು.
ಬಿ.ಅಮೀರ್ ಜಾನ್ ಪರಿಚಯ : ಬಿ.ಎ.ಜೆ ಎಂದು ಹೆಸರುವಾಸಿಯಾಗಿರುವ ಬಿ.ಅಮೀರ್ ಜಾನ್ ರವರು ಬಾಜಿಸಾಬ್ ಮತ್ತು ಸಾಬಿರಾಬಿ ರವರ ದಂಪತಿಗಳಿಗೆ ದಿನಾಂಕ 19-07-1964 ರಂದು ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಗುಡಿಬಂಡೆ ಪಟ್ಟಣದಲ್ಲಿ ಮುಗಿಸಿದ್ದು, ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು. ಅವರು ಚಿಕ್ಕವಯಸ್ಸಿನಿಂದಲೇ ಶಾಲಾ ಕಾಲೇಜುಗಳಲ್ಲಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ದಿನಾಂಕ 28-09-1992 ರಂದು ಸರ್ಕಾರಿ ಸೇವೆಗೆ ಸೇರಿದ್ದು, ಮೊದಲು ಇವರು ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ 15 ವರ್ಷ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಭಾರಿ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಬಳಿಕ ದಿನಾಂಕ 01-10-2007 ರಲ್ಲಿ ಬಾಗೇಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕನಾಗಿ ಬಡ್ತಿ ಹೊಂದಿ ಅನೇಕ ವರ್ಷಗಳು ಉತ್ತಮ ಸೇವೆ ಸಲ್ಲಿಸಿ, ಅನೇಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. ಇನ್ನುಅವರು ದಿನಾಂಕ : 31-07-2024 ರಂದು ವಯೋನಿವೃತ್ತಿ ಹೊಂದಿದ್ದಾರೆ, ನಿವೃತ್ತಿ ಹೊಂದಿದ್ದರು ಸಹ ಅನೇಕ ಬಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಸೇರಿ ಇತರೆ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಬಡ ವಿದ್ಯಾರ್ಥಿಗಳಿಗೆ ದಾರಿದೀಪದಂತಾಗಿದ್ದಾರೆ. ಅಷ್ಟೇ ಅಲ್ಲದೇ ಅವರ ಶಿಷ್ಯರು ಅನೇಕ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.