Attack- ವ್ಯಕ್ತಿಯೋಬ್ಬ ಒಬ್ಬಾಕೆಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ, ಈ ಮಹಿಳೆಗೆ ಇಬ್ಬರು ಮಕ್ಕಳನ್ನು ಸಹ ಕರುಣಿಸಿದ್ದಾನೆ. ಇರುವ ಹೆಂಡತಿ ಸಾಲದು ಅಂತಾ ಮತ್ತೊಬ್ಬಳನ್ನು ಪ್ರೀತಿಸಿ, ಮತ್ತೊಂದು ಸಂಸಾರ ಸಹ ಶುರು ಮಾಡಿದ್ದನಂತೆ. ಈ ಮಾಹಿತಿಯನ್ನು ತಿಳಿದ ಮೊದಲನೇ ಹೆಂಡತಿಯ ಕಡೆಯಬರು ಗಂಡನ ಎರಡನೇ ಹೆಂಡತಿಯನ್ನು ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಗಂಗರಾಜು, ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಜೀಗಾನಹಳ್ಳಿ ಗ್ರಾಮಕ್ಕೆ ಆಗಾಗ ಬಂದು ಹೋಗುತ್ತಿದ್ದ. ಜೀಗಾನಹಳ್ಳಿಗೆ ತನ್ನ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದ. ಈ ರೀತಿ ಬಂದು ಹೋಗುವಾಗ ಅಕ್ಕ-ಮಾವನ ಸಂಬಂಧಿ ರಾಜೇಶ್ವರಿ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ತಂಗಿ ವಾಸವಿರುವ ಮನೆಯ ಪಕ್ಕದ ನಿವಾಸಿ ಸಂಗೀತಾ ಎಂಬ ಯುವತಿಯನ್ನು ಪ್ರೀತಿಸಿ ಹಲವು ವರ್ಷಗಳಿಂದ ಅನೈತಿಕ ಸಂಬಂಧವಿಟ್ಟುಕೊಂಡಿದ್ದನಂತೆ.
ಇನ್ನೂ ಹೆಂಡತಿಯ ಮನೆಯವರ ವಿರೋಧದ ನಡುವೆಯೂ ಹಲವು ವರ್ಷಗಳಿಂದ ಸಂಗೀತಾಳನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಮನೆ ಮಾಡಿ ಇಟ್ಟಿದ್ದ ಎನ್ನಲಾಗಿದೆ. ಆದರೆ ನಿನ್ನೆ ರಾತ್ರಿ ಜೀಗಾನಹಳ್ಳಿ ಗ್ರಾಮದಲ್ಲಿ ಗಂಗರಾಜ ಹಾಗೂ ಸಂಗೀತಾ ಕಾಣುತ್ತಿದ್ದಂತೆ ಗಂಗರಾಜು ಸಂಬಂಧಿಗಳು ಸಂಗೀತಾಳನ್ನು ಫಾರ್ಮ್ ಹೌಸ್ ಒಂದರಲ್ಲಿ ಕೂಡಿಹಾಕಿ ಹಿಗ್ಗಾಮುಗ್ಗಾ ಮನಸೋ ಇಚ್ಚೇ ಹಲ್ಲೆ ಮಾಡಿದ್ದಾರೆ.
ಇನ್ನೂ ನಿನ್ನೆ ಜೀಗಾನಹಳ್ಳಿ ಗ್ರಾಮದಲ್ಲಿ ದೇವಾಲಯವೊಂದರಲ್ಲಿ ಜೀರ್ಣೋದ್ದಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದ್ದರು. ಗಂಗರಾಜ ಹೆಂಡತಿ ರಾಜೇಶ್ವರಿ ಹಾಗೂ ತಂಗಿಯ ಸಂಬಂಧಿಕರು ಈ ಕಾರ್ಯ ಮಾಡುತ್ತಿದ್ದರು. ಆಗ ಸಂಗೀತ ತಂದೆ ರಾಮು ಎಂಬಾತನನ್ನು ಚಂದಾ ಕೇಳಿದ್ದಾರೆ. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಗಂಗರಾಜು ಸಂಬಂಧಿಕರು ಸಂಗೀತಾ ತಂದೆ ರಾಮು ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಕೇಳಲು ಸಂಗೀತಾ ನಿನ್ನೆ ತಡರಾತ್ರಿ ತನ್ನ ಗಂಡ ಗಂಗರಾಜು ಜೊತೆಗೆ ಬೆಂಗಳೂರಿನಿಂದ ಜೀಗಾನಹಳ್ಳಿ ಗ್ರಾಮಕ್ಕೆ ಬಂದಿದ್ದಾಳೆ. ಈ ಸಮಯದಲ್ಲಿ ಕೈಗೆ ಸಿಕ್ಕ ಗಂಗರಾಜು ಹಾಗೂ ಸಂಗೀತಾ ಇಬ್ಬರನ್ನೂ ಫಾರ್ಮ್ ಹೌಸ್ ನಲ್ಲಿ ಕೂಡಿಹಾಕಿದ್ದಾರೆ. ನಂತರ ಸಂಗೀತಾಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಪೇರೆಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಗೀತಾಳನ್ನು ರಕ್ಷಣೆ ಮಾಡಿ ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ಹಲ್ಲೆ ಮಾಡಿದ ಗಂಗರಾಜು ಪತ್ನಿ ಹಾಗೂ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.