School Day – ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಆಸ್ತಿ-ಪಾಸ್ತಿ ಮಾಡುವುದರ ಬದಲಿಗೆ, ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಸಾರ್ಥಕವಾಗುತ್ತದೆ, ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕೆಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯೂ ವಿಷನ್ ಇಂಗ್ಲೀಷ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬಾಲ್ಯದಿಂದಲೇ ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸದರೇ ಅವರು ಉತ್ತಮ ಪ್ರಜೆಗಳಾಗುತ್ತಾರೆ. ಆದರೆ ಅನೇಕ ಕಡೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕಿಂತ ಆಸ್ತಿ ಮಾಡಲು ಮುಂದಾಗುತ್ತಾರೆ. ಮನೆ, ಜಮೀನು, ಕಾರು ಸೇರಿದಂತೆ ಇತರೆ ಆಸ್ತಿ ಮಾಡುತ್ತಾರೆ ವಿನಃ ಮಗುವಿನ ಶಿಕ್ಷಣದ ಬಗ್ಗೆ ಯೋಚನೆ ಮಾಡುವುದಿಲ್ಲ. ಅದೇ ನಿಮ್ಮ ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೇ ಅವರು ಮುಂದೆ ಈ ರೀತಿಯ ಆಸ್ತಿಯನ್ನು ನೀವು ಕೊಡುವುದಕ್ಕಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ. ನಿಮಗೆ ಎಷ್ಟೇ ಕಷ್ಟವಿದ್ದರೂ ಸಹ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನೂ ಮಾತ್ರ ಬಿಡಬೇಡಿ. ಇಂದು ಸಣ್ಣದಾಗಿ ಪ್ರಾರಂಭವಾದ ಈ ಶಾಲೆ ಇದೀಗ ಉತ್ತಮವಾಗಿ ಬೆಳೆಯುತ್ತಿದೆ. ಹೆಚ್ಚಿನ ಶುಲ್ಕವನ್ನು ಪಡೆಯದೇ ಸಣ್ಣ ಪ್ರಮಾಣದ ಶುಲ್ಕವನ್ನು ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆ ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ನಂತರ ಶಾಲಾ ಮುಖ್ಯಸ್ಥೆ ಡಿ.ಎಲ್.ಪರಿಮಳ ಮಾತನಾಡಿ, ಮೊದಲಿಗೆ ನಮಗೆ ಶಾಲೆ ಮಾಡುವ ಉದ್ದೇಶವಿರಲಿಲ್ಲ. ಅರುಣಾಚಲ ಶಿವ ಟ್ರಸ್ಟ್ ಆರಂಭಿಸಿ ಆ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಯೋಜಿಸಿದ್ದೇವು. ಆದರೆ ಈ ಭಾಗದಲ್ಲಿ ಉತ್ತಮವಾದ ಶಿಕ್ಷಣ ನೀಡುವಂತಹ ಶಾಲೆಯನ್ನು ಪ್ರಾರಂಭಿಸಬೇಕೆಂದು ಹಲವು ಹಿತೈಶಿಗಳು ಸಲಹೆ ನೀಡಿದ್ದರು. ಅದರಂತೆ ಸಣ್ಣದಾಗಿ ಶಾಲೆಯನ್ನು ಆರಂಭಿಸಿದ್ದೇವೆ. ಅನೇಕರ ಸಹಕಾರ ಬೆಂಬಲದಿಂದ ಶಾಲೆ ಉತ್ತಮವಾಗಿ ಅಭಿವೃದ್ದಿಯಾಗುತ್ತಿದೆ. ಉತ್ತಮವಾದ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಯ ಗುರಿ ಎಂದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಮುದ್ದು ನೃತ್ಯ ರೂಪಕಗಳು ನೆರೆದಿದ್ದ ಸಭಿಕರ ಗಮನ ಸೆಳೆಯಿತು. ಈ ವೇಳೆ ಪ.ಪಂ ಅಧ್ಯಕ್ಷರಾದ ವಿಕಾಸ್, ಶಾಲೆಯ ಅಧ್ಯಕ್ಷ ಬಾಬುರೆಡ್ಡಿ, ಮುಖ್ಯ ಸುಮಾ, ಸಹ ಶಿಕ್ಷಕರಾದ ತಹಸೀನ್ ಭಾನು, ತುಳಸಿ, ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.