Garments workers – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ನೈರಾ ಕ್ರಿಯೇಷನ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ನೌಕರರು, ತಮಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡುತ್ತಿಲ್ಲ ಎಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ವೇತನ ಕೊಡಿಸಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ದೂರುದಾರರು, ಗುಡಿಬಂಡೆ ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ನೈರಾ ಕ್ರಿಯೇಷನ್ಸ್ ಗಾರ್ಮೆಂಟ್ಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ 30 ಮಂದಿ ಮಹಿಳೆಯರು ಕೆಲಸ ನಿರ್ವಹಿಸಿದ್ದೆವು. ಈಗ ವೇತನ ಕೇಳಿದರೆ, ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಜೊತೆಗೆ ಅವರು ಬೆಂಗಳೂರಿನಲ್ಲಿದ್ದು, ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೂಲಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ ಜೀವನ ನಡೆಸುವುದು ತುಂಬಾನೆ ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ನಮಗೆ ವೇತನ ಕೊಡಿಸಿ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೇಸ್ ಅಧ್ಯಕ್ಷ ನವೀನ್ ರಾಜ್ ಮಾತನಾಡಿ, ಮಹಿಳೆಯರನ್ನು ದುಡಿಸಿಕೊಂಡು ಅವರಿಗೆ ವೇತನ ನೀಡದೇ ಇರುವುದು ಸರಿಯಲ್ಲ. ಅವರ ದುಡಿಮೆಗೆ ಮೋಸ ಮಾಡಬಾರದು. ಆದಷ್ಟು ಶೀಘ್ರವಾಗಿ ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕರಿಗೆ ವೇತನ ನೀಡಲು ಮುಂದಾಗಬೇಕು. ನಾನು ಸಹ ಮಾಲೀಕರನ್ನು ಕರೆಸಿ ನಿಮ್ಮ ವೇತನ ಕೊಡಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಗಾರ್ಮೆಂಟ್ಸ್ ನೌಕರರಾದ ಕಳಾವತಿ, ಸುರೇಂದರ್, ರಾಮಾಂಜಿನಮ್ಮ, ಶಾಜೀಯಾ, ಪುಷ್ಪಾ, ಲಕ್ಷ್ಮೀ, ಸಿಂಧು, ಶಬಾನಾ, ಅಫ್ಸಿಯಾ, ಮುನ್ನಿ, ಹೀನಾ, ರಿಕ್ಸಾನ, ಮಂಜುಳ ಸೇರಿದಂತೆ ಹಲವರು ಇದ್ದರು.