ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ವಾಹನ ಸವಾರರು ದಾರಿ ಗೊತ್ತಾಗದೇ ಇದ್ದಾಗ ಗೂಗಲ್ ಮ್ಯಾಪ್ ಬಳಸೋದು ಸಾಮಾನ್ಯ ಎಂದು ಹೇಳಬಹುದು. ಗೂಗಲ್ ಮ್ಯಾಪ್ ಬಳಸಿ ಕೆಲವೊಂದು ಒಲಾ, ಊಬರ್ ಗಳಂತಹ ಅನೇಕ ಸಂಸ್ಥೆಗಳೂ ಸಹ ಕೆಲಸ ಮಾಡುತ್ತಿವೆ. ಜೊತೆಗೆ ಅನೇಕ ವಾಹನ ಸವಾರರು ಗೂಗಲ್ ಮ್ಯಾಪ್ (Google Map) ಬಳಸಿಯೇ ಪ್ರಯಾಣಿಸುತ್ತಿರುತ್ತಾರೆ. ಇಲ್ಲೀಗ ಗೂಗಲ್ ಮ್ಯಾಪ್ ಅನುಸರಿಸಿ ಪ್ರಯಾಣಿಸಿದ ಸವಾರರಿಗೆ ಬಿಗ್ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,
ಇಬ್ಬರು ಯುವಕರು ಗೂಗಲ್ ಮ್ಯಾಪ್ (Google Map) ಬಳಸಿ ಆಸ್ಪತ್ರೆಗೆ ಹೋಗಲು ಸಂಚರಿಸುತ್ತಿರುತ್ತಾರೆ. ಆದರೆ ಗೂಗಲ್ ಮ್ಯಾಪ್ ಎಡವಟ್ಟಿನಿಂದ ಕಾರು ಸೀದಾ ಹೊಂಡಕ್ಕೆ ಹೊಳೆಗೆ ಹೋಗಿದ್ದಾರೆ. ಅದೃಷ್ಟಾವಶಾತ್ ಕಾರಿನಲ್ಲಿದ್ದ ಇಬ್ಬರೂ ಯುವಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕೇರಳದ ಕಾಸರಗೋಡಿನ ತಸ್ರೀಫ್ (36) ಮತ್ತು ಅಬ್ದುಲ್ ರಶೀದ್ (35) ಎಂಬವರು ಉಪ್ಪಿನಂಗಡಿಯಲ್ಲಿನ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಅವರು ಗೂಗಲ್ ಮ್ಯಾಪ್ ನಂಬಿ ಕಾರನ್ನು ತುಂಬಿ ಹರಿಯುತ್ತಿದ್ದ ಹೊಳೆಗೆ ಇಳಿಸಿದ್ದಾರೆ. ಆದರೆ ಇಬ್ಬರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಇನ್ನೂ ಇಬ್ಬರೂ ಯುವಕರು ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪಳ್ಳಂಜಿ ಎಂಬಲ್ಲಿ ಹೊಳೆಯ ಸೇತುವೆ ದಾಟುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಜೋರು ಮಳೆಯಿಂದ ಸೇತುವೆ ಜಲಾವೃತವಾಗಿದೆ. ಸೇತುವೆ ಎರಡೂ ಕಡೆ ಯಾವುದೇ ತಡೆ ಗೋಡೆಯಿಲ್ಲದ ಕಾರಣ ಕಾರು ಸೀದಾ ಹೋಗಿ ಹೊಳೆಗೆ ಬಿದ್ದಿದೆ. ಕಾರು ತೇಲುತ್ತಾ ಹೋಗಿ ದಡಲ್ಲಿದ್ದ ಮರವೊಂದಕ್ಕೆ ಸಿಕ್ಕಿಹಾಕಿಕೊಂಡಿದೆ. ಬಳಿಕ ಕಾರಿನಲ್ಲಿದ್ದ ಯುವಕರ ಸಮಯಪ್ರಜ್ಞೆ ಬಳಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಇಬ್ಬರೂ ಯುವಕರನ್ನೂ ರಕ್ಷಣೆ ಮಾಡಿದ್ದಾರೆ. ಸದ್ಯ ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ಪ್ರತಿ ಬಾರಿ ಗೂಗಲ್ ಮ್ಯಾಪ್ ನಂಬಿ ಹೋಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.