Crime News- ವಿವಾಹೇತರ ಸಂಬಂಧಗಳ ಕಾರಣದಿಂದ ಅನೇಕ ಕೊಲೆಗಳು ನಡೆದಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪತ್ನಿಯೊಬ್ಬಳು ತನ್ನ ಪ್ರಿಯಕರನ ಸಹಾಯದೊಂದಿಗೆ ಪತಿಯನ್ನೇ ಕೊಲೆ ಮಾಡಿದ್ದಾಳೆ. ಗಂಡನ ಮೃತದೇಹದ ಜೇಬಿನಲ್ಲಿ 8 ವಯಾಗ್ರ ಪ್ಯಾಕ್ ಗಳನ್ನು ಇಟ್ಟು, ಈ ಮಾತ್ರೆಗಳನ್ನು ಹೆಚ್ಚಾಗಿ ಸೇವನೆ ಮಾಡಿದ್ದರಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಾಳೆ. ಅದನ್ನು ಪೊಲೀಸರು ಸಹ ಆರಂಭದಲ್ಲಿ ನಂಬಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಚಲಾಕಿ ಪತ್ನಿಯ ಅಸಲೀ ಕಥೆ ಹೊರಬಂದಿದೆ ಎನ್ನಲಾಗಿದೆ.
ಅಂದಹಾಗೆ ಈ ಘಟನೆ ಕಾನ್ಪುರದಲ್ಲಿ ನಡೆದಿದೆ. ಅಬಿದ್ ಅಲಿ ಎಂಬ ವ್ಯಕ್ತಿ ತನ್ನ ಪತ್ನಿ ಶಬಾನಾ ಹಾಗೂ ಮಗನೊಂದಿಗೆ ಕಾನ್ಪುರದಲ್ಲಿ ಜೀವನ ಸಾಗಿಸುತ್ತಿದ್ದ. ಜ.19 ರಂದು ಶಬಾನಾ ಪೊಲೀಸ್ ಠಾಣೆಗೆ ಹೋಗಿ ತನ್ನ ಪತಿ ಮಿತಿಮೀರಿದ ವಯಾಗ್ರ ಸೇವನೆ ಮಾಡಿ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೃತ ಅಬೀದ್ ಜೇಬಿನಲ್ಲಿ 8 ವಯಾಗ್ರ ಮಾತ್ರೆಗಳು ಕಂಡು ಬಂದಿದೆ. ಜೊತೆಗೆ ಮೃತ ದೇಹದ ಮೇಳೆ ಯಾವುದೇ ಗಾಯಗಳಂತಹ ಗುರುತುಗಳು ಕಂಡುಬಂದಿರಲಿಲ್ಲ. ತನ್ನ ಗಂಡನ ಮರಣದ ನಂತರ ಶಬಾನಾ ತುಂಬಾ ಅಳುತ್ತಿರುವುದನ್ನು ಗಮನಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶಬಾನಾ ಸತ್ಯವನ್ನು ಹೇಳುತ್ತಿದ್ದಾಳೆಂದು ಆರಂಭದಲ್ಲಿ ಪೊಲೀಸರು ಸಹ ನಂಬಿದ್ದಾರೆ.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಎಲ್ಲಾ ಅಂತ್ಯಕ್ರಿಯೆಗಳನ್ನು ಸಹ ನಡೆಸಲಾಗಿದೆ. ಆದರೆ ಶವಪರೀಕ್ಷೆಯ ವರದಿ ಬಂದ ಬಳಿಕ ಅಬೀದ್ ಸಾವಿನ ಅಸಲೀ ಸತ್ಯ ಹೊರಬಂದಿದೆ. ಅಬೀದ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವರದಿಯಲ್ಲಿತ್ತು ಎನ್ನಲಾಗಿದೆ. ನಂತರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಶಬಾನಾಳ ಸಹೋದರ ಸಲೀಂ ಎಂಬಾತ ಕೊಲೆ ಮಾಡಿರಬಹುದು ಅಥವಾ ಶಬಾನಾ ಗೆ ಯಾರಾದರೂ ಸಹಾಯ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಬಳಿಕ ಶಬಾನಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಬಳಿಕ ಶಬಾನಾಳ ಪೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಲಾಗಿದೆ, ಆಕೆ ರೆಹಾನ್ ಎಂಬ ಯುವಕನೊಂದಿಗೆ ಮಾತನಾಡುತ್ತಿದ್ದಳು ಎಂದು ತಿಳಿದುಬಂದಿದೆ. ಅಬೀದ್ ಸತ್ತಾಗಲೂ ಸಹ ಇಬ್ಬರು ಪೋನ್ ನಲ್ಲಿ ಮಾತನಾಡಿದ್ದರಂತೆ. ನಂತರ ರೆಹಾನ್ ನನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನೂ ವಿಚಾರಣೆ ನಡೆಸಿದಾಗ ಇಬ್ಬರೂ ಸೇರಿಕೊಂಡು ಅಬೀದ್ ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೂಲಗಳ ಪ್ರಕಾರ ಶಬಾನಾ ಹಾಗೂ ರೆಹಾನ್ 1 ವರ್ಷದಿಂದ ಸೋಷಿಯಲ್ ಮಿಡಿಯಾ ಮೂಲಕ ಸ್ನೇಹಿತರಾಗಿದ್ದರು. ರೆಹಾನ್ ಉನ್ನಾವೋದ ಬಂಗಾರಮೌ ನಿವಾಸಿಯಾಗಿದ್ದಾನೆ. ಅಬೀದ್ ಮನೆಯಲ್ಲಿ ಇಲ್ಲದೇ ಇದ್ದಾಗ ಅವನು ಶಬಾನಾಳನ್ನು ಭೇಟಿಯಾಗಲು ಬರುತ್ತಿದ್ದನಂತೆ. ಈ ನಡುವೆ ಇಬ್ಬರ ನಡುವೆ ಅಕ್ರಮ ಸಂಬಂಧ ಸಹ ಹುಟ್ಟಿಕೊಂಡಿದೆ.
ಅವರಿಬ್ಬರ ಬಗ್ಗೆ ಅಬೀದ್ ಗೂ ಅನುಮಾನ ಶುರುವಾಗಿದೆ. ಈ ಕಾರಣದಿಂದ ಅಬೀದ್ ಹಾಗೂ ಶಬಾನಾ ನಡುವೆ ಗಲಾಟೆ, ವಾದ ಗಳೂ ಸಹ ಶುರುವಾಗಿದೆ. ಈ ಕಾರಣದಿಂದ ಶಬಾನಾ ಹಾಗೂ ರೆಹಾನ್ ಅಬೀದ್ ನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅಬೀದ್ ಕೊಲೆಯಾದ ದಿನ ಶಬಾನಾ, ರೆಹಾನ್ ಹಾಗೂ ರೆಹಾನ್ ಸ್ನೇಹಿತ ಮನೆಯಲ್ಲಿದ್ದರು. ಆ ಮೂರು ಮಂದಿ ಸೇರಿಕೊಂಡು ಅಬೀದ್ ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಅಬೀದ್ ನ ಜೇಬಿನಲ್ಲಿ ವಯಾಗ್ರ ಮಾತ್ರೆಗಳನ್ನು ಜೇಬಿನಲ್ಲಿಟ್ಟಿದ್ದಾಳೆ. ಅದು ಕೊಲೆಯಲ್ಲ ಅತಿಯಾದ ಮಾತ್ರೆಗಳ ಸೇವನೆಯಿಂದ ಪತಿ ಸತ್ತಿದ್ದಾನೆ ಎಂದು ಬಿಂಬಿಸಲು ಮುಂದಾಗಿದ್ದಾಳೆ. ಆದರೆ ಆಕೆ ಮಾಡಿದ ಪಾಪವನ್ನು ಮುಚ್ಚಿಡಲು ತುಂಬಾ ದಿನ ಬೇಕಾಗಲಿಲ್ಲ. ಇದೀಗ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.