ರಾಜ್ಯದಲ್ಲಿ ಇತ್ತೀಚಿಗೆ ಕೇಳಿಬಂದ ವಾಲ್ಮೀಕಿ ನಿಗಮದ ಕೋಟಿ ಹಗರಣ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಮೈಸೂರು ಮುಡಾದಲ್ಲಿ ಸಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಹುದ್ದೆಗಳ ಬಗ್ಗೆ ರಾಜಕೀಯ ಚರ್ಚೆ ಸಹ ಜೋರಾಗಿದೆ. ವಾಲ್ಮೀಕಿ ಹಾಗೂ ಮೈಸೂರು ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.
ಕರ್ನಾಟಕ ವಾಲ್ಮೀಕಿ ನಿಗಮದ ಕೋಟ್ಯಂತರ ಹಗರಣ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಸಿಎಂ ಮೂಗಿನಡಿ ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. ಆದರೆ ಈ ಪ್ರಕರಣಗಳ ಹಾದಿಯನ್ನು ತಪ್ಪಿಸಲು ಹಾಗೂ ಜನರ ದಿಕ್ಕು ಬದಲಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ನಾಟಕವಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂಬ ಮಾಹಿತಿಯನ್ನು ಬಿಜೆಪಿ ಕಲೆ ಹಾಕುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಲ್ಲರ ತಲೆದಂಡವಾಗಬೇಕು.
ಇನ್ನೂ ಬಡವರಿಗೆ ದಲಿತರಿಗೆ ಜಾಗ ಕೊಡಲು ಆಗುವುದಿಲ್ಲ, ಆದರೆ ಲೂಟಿಕೋರರಿಗೆ ಜಾಗ ಕೊಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ಹೆಚ್ಚಾಗುತಿದೆ. ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿ ಹೋಗಿದೆ, ಬೇರೆ ರಾಜ್ಯದ ಚುನಾವಣೆಗೆ ಎಷ್ಟು ಹಣ ಹೋಗಿದೆ. ಎಲ್ಲವೂ ತನಿಖೆಯಾಗಬೇಕಿದೆ. ಎಲ್ಲದರ ಬಗ್ಗೆ ಬಿಜೆಪಿ ಸಹ ಮಾಹಿತಿ ಕಲೆ ಹಾಕುತ್ತಿದೆ. ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.
ರಾಜ್ಯದಲ್ಲಿ ಸಿಎಂ ಆಜ್ಞೆಯಿಲ್ಲದೇ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸಿಎಂ ಏನ್ ಹೆಬ್ಬೆಟ್ಟಾ, ಫೈನಾನ್ಸ್ ಮಿನಿಸ್ಟರ್ ಅಲ್ಲವೇ, ಸಿದ್ದರಾಮಯ್ಯನವರು ಅತ್ಯಂತ ಮೇಧಾವಿ. ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಅವರಿಗಿದೆ. ಅಷ್ಟೊಂದು ಖ್ಯಾತಿಯಿರುವ ಅವರ ಇಲಾಖೆಯಿಂದಲೇ ಸಾಲು ಸಾಲು ಹಗರಣಗಳು ನಡೆಯುತ್ತಿವೆ. ಅದರಲ್ಲೂ ಮೈಸೂರಿನ ಮುಡಾದಲ್ಲಿ ಸಿಎಂ ಕೃಪಾಕಟಾಕ್ಷವಿಲ್ಲದೇ ಹಗರಣ ನಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರಿಗೆ ಗೊತ್ತಿದ್ದು ಹಗರಣ ನಡೆದಿದ್ದರೇ ಅವರು ಭ್ರಷ್ಟಾಚಾರಿ ಸಿಎಂ, ಗೊತ್ತಿಲ್ಲದೆ ನಡೆದಿದ್ದರೇ ಅವರು ದುರ್ಬಳ ಸಿಎಂ. ಸರ್ಕಾರ ತಾಂತ್ರಿಕವಾಗಿ ಸರ್ಕಾರ ಸೇಫ್ ಆಗಿದೆ. ಆತ್ಮವಿಶ್ವಾಸದಲ್ಲಿ ವೀಕ್ ಆಗಿದೆ ಎಂದು ಟೀಕಿಸಿದರು.