ವಾಲ್ಮೀಕಿ ನಿಗಮದ ಹಗರಣ ಸಂಬಂಧ ಇತ್ತೀಚೆಗೆ ಶಿವಮೊಗ್ಗದಲ್ಲಿ ಸರ್ಕಾರಿ ನೌಕರ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅದೇ ರೀತಿ ಬೆಳಗಾವಿಯಲ್ಲಿ (Belagavi) ಮತ್ತೊಬ್ಬ ಸರ್ಕಾರಿ ನೌಕರ ರಾಜ್ಯ ಸರ್ಕಾರದ ಸಚಿವರ ಆಪ್ತ ಸಹಾಯಕನ ಹೆಸರನ್ನು ಬರೆದಿಟ್ಟು ತಹಶೀಲ್ದಾರರ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ (Belagavi) ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (05) ಬೆಳಗಿನ ಜಾವ ತಹಸೀಲ್ದಾರ್ ಕಚೇರಿಗೆ ಬಂದಿದ್ದ ರುದ್ರಣ್ಣ ತಹಸೀಲ್ದಾರ್ ಬಸವರಾಜ್ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರುದ್ರಣ್ಣ ಬೆಳಗಾವಿಯ ತಹಸೀಲ್ದಾರ್ ರವರ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದರು. ಕಳೆದ ದಿನವಷ್ಟೆ ಬೆಳಗಾವಿ ಕಚೇರಿಯಿಂದ ಸವದತ್ತಿ ತಹಸೀಲ್ದಾರ್ ಕಚೇರಿಗೆ ರುದ್ರಣ್ಣ ರವರನ್ನು ವರ್ಗಾವಣೆ ಮಾಡಿದ್ದರು. ಆದರೆ ಇಂದು ಬೆಳಿಗ್ಗೆ ಅವರು ತಹಸೀಲ್ದಾರರ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಈ ಆತ್ಮಹತ್ಯೆ ರಾಜ್ಯದಾದ್ಯಂತ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ವರ್ಗಾವಣೆ ದಂದೆಗೆ ಬೇಸತ್ತು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡರೇ ಎಂಬ ಅನುಮಾನ ಮೂಡುವಂತೆ ಮಾಡಿದೆ. ತನ್ನ ಆತ್ಮಹತ್ಯೆಗೆ ಕಾರಣ ಯಾರು ಎಂಬ ವಿಚಾರವನ್ನು ನಿನ್ನೆ ರುದ್ರಣ್ಣ ವಾಟ್ಸಾಪ್ ನಲ್ಲಿ ಹಾಕಿದ್ದಾನೆ.
ಇನ್ನೂ ರುದ್ರಣ್ಣ ತನ್ನ ವರ್ಗಾವಣೆಯ ಸುದ್ದಿ ಕೇಳುತ್ತಿದ್ದಂತೆ ಸಂಜೆ 7 ಗಂಟೆ 31 ನಿಮಿಷಕ್ಕೆ ನನ್ನ ಸಾವಿಗೆ ಬಸವರಾಜ್ ನಾಗರಾಳ ಹಾಗೂ ಸೋಮುರವರೇ ನೇರಕಾರಣ. ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಸಂದೇಶ ಹಾಕಿದ್ದಾನೆ. ಜೊತೆಗೆ ತನ್ನ ವರ್ಗಾವಣೆ ಆದೇಶ ಪ್ರತಿಯನ್ನೂ ವಾಟ್ಸಾಪ್ ನಲ್ಲಿ ಹಾಕಿದ್ದಾನೆ. ಬಳಿಕ ಅಶೋಕ್ ಕಬ್ಬಲಿಗೇರ್ ಕೂಡ ಕಾರಣ ಎಂದು ಸಂದೇಶ ಹಾಕಿದ್ದ. ಈ ಡೆತ್ ನೋಟ್‌ನಲ್ಲಿ ಬರೆದಿಟ್ಟ ಸೋಮು ದೊಡದವಾದ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಆಗಿದ್ದಾರೆ. ನಂತರ ರಾತ್ರಿ ಮನೆಯಲ್ಲಿ ಪತ್ನಿ ಹಾಗೂ ತಾಯಿಯ ಜೊತೆಗೆ ಊಟಕ್ಕೆ ಕುಳಿತಿದ್ದಾಗ, ಯಾರದ್ದೋ ಪೋನ್ ಬಂತು ಅಂತಾ ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾನೆ ಎಂದು ಅವರ ತಾಯಿ ಹೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಡೆತ್ ನೋಟ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹೆಸರು ಉಲ್ಲೇಖವಾಗಿದೆ. ಕಿರುಕುಳದಿಂದ ಆತ್ಮಹತ್ಯೆ ಅಂತಾ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೇಸ್ ಸರ್ಕಾರದಲ್ಲಿ ಕಿರುಕುಳದಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆಯಿದ್ದರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.