Belagavi Lovers – ಇತ್ತೀಚಿನ ದಿನಗಳಲ್ಲಿ ಪ್ರೀತಿಗಾಗಿ ಜೀವ ತೆತ್ತ ಘಟನೆಗಳು ಹೆಚ್ಚಾಗುತ್ತಿವೆ. ಪ್ರೀತಿಸಿದವರನ್ನು ಬಿಟ್ಟು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ, ಕೆಲವರು ತಮ್ಮ ಜೀವವನ್ನೇ ತೆಗೆದುಕೊಂಡುಬಿಡುತ್ತಾರೆ. ಇದೇ ರೀತಿ ಒಂದು ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆಯವರೊಂದಿಗೆ ನಿಶ್ಚಿತಾರ್ಥವಾದ ಮನನೊಂದ ಯುವತಿ ಮತ್ತು ಆಕೆಯ ಪ್ರಿಯಕರ ಇಬ್ಬರೂ ಒಂದು ಆಟೋ ರಿಕ್ಷಾದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Belagavi Lovers – ಬೆಳಗಾವಿಯಲ್ಲಿ ಪ್ರೇಮಿಗಳ ದುರಂತ ಅಂತ್ಯ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಪ್ರೇಮಿಗಳನ್ನು ರಾಘವೇಂದ್ರ ಜಾಧವ್ (28) ಮತ್ತು ರಂಜೀತಾ ಚೋಬರಿ (26) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಗಳಾಗಿದ್ದರು.
Belagavi Lovers – ಹಲವು ವರ್ಷಗಳ ಪ್ರೀತಿ, ಕಹಿಯಾದ ಅಂತ್ಯ
ರಾಘವೇಂದ್ರ ಮತ್ತು ರಂಜೀತಾ ಹಲವು ವರ್ಷಗಳಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗಿ ಜೊತೆಯಾಗಿ ಬದುಕಬೇಕೆಂಬ ಕನಸು ಕಂಡಿದ್ದರು. ಆದರೆ, ಕಥೆ ಬೇರೆಯದೇ ತಿರುವು ಪಡೆದಿದೆ. ಸುಮಾರು 15 ದಿನಗಳ ಹಿಂದೆ ರಂಜೀತಾಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಿತಾರ್ಥ ಮಾಡಲಾಗಿತ್ತು. ಇದು ರಂಜೀತಾಳ ಮನಸ್ಸಿಗೆ ತೀವ್ರ ನೋವುಂಟು ಮಾಡಿತ್ತು. ರಂಜೀತಾ ತನ್ನ ಈ ನೋವನ್ನು ಆಟೋ ಚಲಾಯಿಸುವ ತನ್ನ ಪ್ರಿಯಕರ ರಾಘವೇಂದ್ರನೊಂದಿಗೆ ಹಂಚಿಕೊಂಡಿದ್ದಾಳೆ. ಈ ವಿಚಾರ ಕೇಳಿ ರಾಘವೇಂದ್ರ ಕೂಡ ತೀವ್ರವಾಗಿ ನೊಂದುಕೊಂಡಿದ್ದಾನೆ. ಇಬ್ಬರೂ ಒಟ್ಟಾಗಿ ಸಾಯಲು ನಿರ್ಧರಿಸಿದ್ದಾರೆ.
Read this also : ರೀಲ್ಸ್ ಜಗಳದ ದುರಂತ ಅಂತ್ಯ: ಪ್ರೇಯಸಿ ಸಾವಿಗೆ ಕಾರಣವಾಯ್ತು ಆ ವಿಡಿಯೋ…!
Belagavi Lovers – ಆಟೋದಲ್ಲೇ ಅಂತಿಮ ನಿರ್ಧಾರ
ಇಂದು (ಜುಲೈ 01) ಬೆಳಗ್ಗೆ ಇಬ್ಬರೂ ಆಟೋದಲ್ಲಿ ಚಿಕ್ಕನಂದಿ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ರಾಘವೇಂದ್ರ ಚಲಾಯಿಸುತ್ತಿದ್ದ ಆಟೋ ರಿಕ್ಷಾದ ಹಿಂದಿನ ಸೀಟಿನ ಮೇಲ್ಭಾಗದಲ್ಲಿರುವ ಕಬ್ಬಿಣದ ರಾಡ್‌ಗೆ ಹಗ್ಗ ಕಟ್ಟಿ, ಇಬ್ಬರೂ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ದಾರುಣ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ಪ್ರದೇಶದಲ್ಲಿ ದುಃಖ ಮಡುಗಟ್ಟಿದೆ. ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಈ ಜೋಡಿಯ ಕಥೆ ಅನೇಕರ ಮನಸ್ಸನ್ನು ಕಲಕಿದೆ.