ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಯಾವ ರೀತಿ ಇರುತ್ತದೆ ಎಂಬುದು ತಿಳಿದೇ ಇದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಘನೆ ಮಾಡುತ್ತಿರುತ್ತಾರೆ. ಸಾರಿಗೆ ಇಲಾಖೆ ಸಹ ಟ್ರಾಫಿಕ್ ನಿಯಮಗಳನ್ನು ಜಾರಿ ಮಾಡಿದರೂ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಇದೀಗ ವಾಹನ ಸವಾರರ ನಿರ್ಲಕ್ಷ್ಯವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಖದೀಮರು ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದ ಜಾಲವನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ತಾವು ಟ್ರಾಫಿಕ್ ಪೊಲೀಸರೆಂದು ಹೇಳಿಕೊಂಡು ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೀರಾ ಎಂದು ವಸೂಲಿಗೆ ಇಳಿದಿದ್ದಾರೆ. ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಬಂದ ಹೊರ ರಾಜ್ಯದ ತಂಡ ಸುಲಭವಾಗಿ ಹಣ ಸಂಪಾದನೆ ಮಾಡುವ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ನಕಲಿ ಟ್ರಾಫಿಕ್ ಪೊಲೀಸರಾಗಿ ಅವತಾರ ತಾಳಿದ್ದಾರೆ. ಈ ಖದೀಮರು ಟ್ರಾಫಿಕ್ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ನಕಲಿ ರಸೀದಿಯನ್ನು ವಾಟ್ಸಾಪ್ ಮೂಲಕ ಕಳುಹಿಸಿ ಬಳಿಕ ದಂಡದ ಹೆಸರಿನಲ್ಲಿ ವಸೂಲಿ ಮಾಡಿದ್ದಾರೆ. ಕಳೆದ ವರ್ಷ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಿದಾಗ ನೂರು ಕೋಟಿಗೂ ಅಧಿಕ ದಂಡ ವಸೂಲಿಯಾಗಿತ್ತು. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡು ಈ ಖದೀಮರು ಬೆಂಗಳೂರು ಪೊಲೀಸರು ವಾಹನ ಸವಾರರ ಅನುಕೂಲಕ್ಕಾಗಿ ಅಭಿವೃದ್ದಿಪಡಿಸಿರುವ ಟ್ರಾಫಿಕ್ ಫೈನ್ ಆಪ್ ಹಾಗೂ ಕೇಂದ್ರ ಸರ್ಕಾರ ವಾಹನ ನೊಂದಣಿ ಮಾಹಿತಿಗಾಗಿ ಲಭ್ಯರುವ ವೆಬ್ ಸೈಟ್ ದುರುಪಯೋಗ ಪಡಿಸಿಕೊಂಡು ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಪಶ್ಚಿಮ ಬಂಗಾಳದ ಮೂರು ಆರೋಪಿಗಳು, ಟ್ರಾಫಿಕ್ ಸಿಗ್ನಲ್ ಬಳಿ ನಿಂತು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಪೊಟೋ ತೆಗೆದುಕೊಳ್ಳುತ್ತಿದ್ದರು. ಬಳಿಕ ಅವರ ಪೋನ್ ನಂಬರ್ ಹುಡುಕಿ ಅವರ ಮೊಬೈಲ್ ಗೆ ವಾಟ್ಸಾಪ್ ಮೂಲಕ ಪೊಟೋ ಕಳುಹಿಸಿ ಟ್ರಾಫಿಕ್ ಉಲ್ಲಂಘನೆ ದಂಡವನ್ನು ಕಟ್ಟಲು ಹೇಳುತ್ತಿದ್ದರು. ನಕಲಿ ಕ್ಯೂ ಆರ್ ಕೋಡ್ ಹಾಗೂ ಯುಪಿಐ ಐಡಿಗಳನ್ನು ವಾಹನ ಸವಾರರ ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಿ ದಂಡದ ಮೊತ್ತ ವಸೂಲಿ ಮಾಡುತ್ತಿದ್ದರು. ಈ ವೇಳೆ ವಾಹನ ಸವಾರನೊಬ್ಬ ನೀವು ಪೊಲೀಸರು ಎನ್ನುವುದಕ್ಕೆ ಗ್ಯಾರಂಟಿ ಏನು ಎಂದು ಕೇಳಿದ್ದಕ್ಕೆ ಕರ್ನಾಟಕ ಪೊಲೀಸ್ ಹೆಡ್ ಕಾನಿಸ್ಟೇಬಲ್ ಎಂಬ ಐಡಿ ತೋರಿಸಿದ್ದಾರೆ. ಇದು ನಕಲಿ ಎಂದು ತಿಳಿದ ಕೂಡಲೇ ಆ ವಾಹನ ಸವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ತನಿಖೆ ನಡೆಸಿದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಇಸ್ಮಾಯಿಲ್ ಆಲಿ, ಸುಭೀರ್ ಮಲ್ಲಿಕ್ ಹಾಗೂ ರಂಜನ್ ಕುಮಾರ ಪೋರ್ಬಿ ಎಂಬುವವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.