ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿ ರಂಗನ ಬಾವಿಯಲ್ಲಿ ಈಜಲು ಹೋಗಿದ್ದ ಐಟಿಐ ಕಾಲೇಜಿನಲ್ಲಿ ಓದುತ್ತಿರುವ ಬಾಲಕ ಮೃತಪಟ್ಟಿರುವ ಘಟನೆ ನಡೆದಿದ್ದು, ಇನ್ನೂ ಮೃತದೇಹ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಅವಿರಥ ಪ್ರಯತ್ನ ಮಾಡುತ್ತಿದ್ದಾರೆ.
ಮೃತ ದುರ್ದೈವಿಯನ್ನು ವೆಂಕಟಾಚಲಪತಿ (17) ಎಂದು ಗುರ್ತಿಸಲಾಗಿದೆ. ಮೃತ ಬಾಲಕ ಗುಡಿಬಂಡೆಯ ಐಟಿಐ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ. ಮೂಲತಃ ವೆಂಕಟಾಚಲಪತಿ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವನು. ಗುಡಿಬಂಡೆ ಪಟ್ಟಣದ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಓದುತ್ತಿದ್ದ. ಅ.23 ರಂದು ಎಂದಿನಂತೆ ಕಾಲೇಜಿನಿಂದ ಮದ್ಯಾಹ್ನ ಊಟ ಮಾಡಲು ಬಂದು ಬಳಿಕ ಹಾಸ್ಟಲ್ ಪಕ್ಕದಲ್ಲೇ ಇದ್ದ ಬಿಳಿಗಿರಿ ರಂಗನ ಬಾವಿಯಲ್ಲಿ ಈಜಲು ಸ್ನೇಹಿತರೊಂದಿಗೆ ಹೋಗಿದ್ದಾನೆ. ನೀರಿನಲ್ಲಿ ಬಿದ್ದ ವೆಂಕಟಾಚಲಪತಿ ಮೇಲಕ್ಕೆ ಬರದೇ ಇದಿದ್ದನ್ನು ಕಂಡು ಇತರರು ಕೂಗಿ ಹೇಳಿದ್ದಾರೆ.
ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಖ್ಕೆ ಬಂದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸುಮಾರು ಮೂರು ಗಂಟೆಗೂ ಅಧಿಕ ಸಮಯ ಮೃತದೇಹಕ್ಕಾಗಿ ಶೋಧ ನಡೆಸಲಾಯಿತು. ಆದರೂ ಬಾಲಕನ ದೇಹ ಕಂಡುಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ಅಧೀಕಾರಿಗಳು, ಐಟಿಐ ಕಾಲೇಜಿನ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಇನ್ನೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ಪಟ್ಟಣದ ಬಿಳಿಗಿರಿ ರಂಗನ ಬಾವಿಯಲ್ಲಿ ಐಟಿಐ ವಿದ್ಯಾರ್ಥಿ ಮುಳುಗಿ ಮೃತ ಪಟ್ಟಿರುವ ಸ್ಥಳಕ್ಕೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ. ರವೀಂದ್ರ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ ನಿಟ್ಟಾಲಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ತೇಜಾನಂದರೆಡ್ಡಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿ ರೆಡ್ಡಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದ್ದು, ಕಾರ್ಯಾಚರಣೆಯನ್ನು ವೀಕ್ಷಿಸಿ, ಮಾಹಿತಿ ಪಡೆದು, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.