ಒಬ್ಬ ಎಂ.ಎಲ್.ಎ ಕೆಟ್ಟರೆ ಆಕ್ಷೇತ್ರ ಕೆಡುತ್ತೆ, ಅಧಿಕಾರಿ ಕೆಟ್ಟರೆ ಸಂಬಂಧಿಸಿದ ಇಲಾಖೆ ಕೆಡುತ್ತೆ ಆದರೆ ಒಬ್ಬ ಶಿಕ್ಷಕ ಕೆಟ್ಟರೆ ಇಡೀ ಸಮಾಜವೇ ಹಾಳಾಗುತ್ತೆ. ಶಿಕ್ಷಕರಿಗೆ ಗುರು ಸ್ಥಾನ ನೀಡಿ ಆಗ್ರಹ ಸ್ಥಾನ ನೀಡಿದ್ದಾರೆ. ಶಿಕ್ಷಕರಿಗೆ ಇರುವ ಗೌರವ, ಘನತೆ ಇಡೀ ಜಗತ್ತಿನಲ್ಲಿ ಯಾವುದೇ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಸಿಗಲ್ಲ, ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಘನತೆ ಗೌರವ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಕರಿಗೆ ಇದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ.ಎಸ್.ರಾಧಾಕೃಷ್ಣನ್ ರವರ 137ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಂಕಗಳ ಗಳಿಕೆಯ ವಿಚಾರದಲ್ಲಿ ವಿದ್ಯಾಸಂಸ್ಥೆಗಳು ಪೈಪೋಟಿ ನಡೆಸುವ ಬದಲಿಗೆ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಬೇಕಾದ ಅಗತ್ಯವಿದೆ ಆದರೆ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ಶಿಸ್ತು ಕಲಿತರೆ ಭವಿಷ್ಯದಲ್ಲಿ ಆ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಲು ಸಹಕಾರಿಯಾಗುತ್ತೆ ಎಂದರು.
ಈ ಹಿಂದೆ ಈ ಭಾಗದಲ್ಲಿ 2 ವೈದ್ಯಕೀಯ, 10 ಇಂಜನಿಯರ್ ಇದ್ದರು ಆದರೆ ಐಎಸ್ ಐಪಿಎಸ್ ನೋಡಿದ್ದೆ ಇಲ್ಲ ಆದರೆ ಇಂದಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಹಾಗೂ ಶಿಕ್ಷಕರ ಸಹಕಾರದಿಂದ ೧೫೦ಕ್ಕೂ ಹೆಚ್ಚು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗದ ಅಗತ್ಯವಿದೆ. ಖಾಸಗಿ ಶಾಲಾ ಕಾಲೇಜುಗಳ ವಿದ್ಯಾಸಂಸ್ಥೆಗಳಿಗೆ ಆದಾಯವೂ ಮುಖ್ಯ ಅಷ್ಟೇ ಮುಖ್ಯವಾಗಿ ಉತ್ತಮ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದ ಅವರು ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ನಿಮ್ಮ ಜೊತೆಗೆ ಇರುವುದಾಗಿ ಭರವಸೆ ನೀಡಿದರು.
ಖಾಸಗಿ ಅನುದಾನರಹಿತ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವೈ ಶ್ರೀನಿವಾಸರೆಡ್ಡಿ ಮಾತನಾಡಿ, ಒಳ್ಳೆಯ ಭಾರತವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವರವಾದದ್ದು. ಇಡೀ ವಿಶ್ವದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಮತ್ಯಾರಿಗೂ ಸಿಗಲ್ಲ, ಎಲ್ಲರೂ ಶಿಕ್ಷಕರು ಆಗಲು ಸಾಧ್ಯವಿಲ್ಲ ಎಂದ ಅವರು ಮಾತೃದೇವೋ ಭವ, ಪಿತೃದೇವೋಭವ, ಆರ್ಚಾಯ ದೇವೋಭವ ಎಂಬುದಾಗಿ ಈ ಹಿಂದಿನ ದಿನಗಳಲ್ಲಿ ಹೇಳಿಕೊಡುತ್ತಿದ್ದರು ಆದರೆ ಇಂದು ಯಾರು ಇದನ್ನು ಪಾಲಿಸುತ್ತಿಲ್ಲ ಎಂದ ಅವರು ಮುಂದಿನಗಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವಂತಹ ಕೆಲಸಕ್ಕೆ ಮುಂದಾಗುವ ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರು ಕೈಜೋಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶಾಸಕ ಎಸ್.ಎನ್,ಸುಬ್ಬಾರೆಡ್ಡಿ ಸೇರಿದಂತೆ ತಾಲೂಕಿನ ವಿವಿಧ ಖಾಸಗಿ ಶಾಲಾ ಕಾಲೇಜುಗಳ ವಿದ್ಯಾಸಂಸ್ಥೆಗಳ ಮಾಲಿಕರಿಗೆ ಹಾಗೂ ಒಕ್ಕೂಟದ ಅಧ್ಯಕ್ಷ ವೈ.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ಪ್ರೋ.ಡಿ.ಶಿವಣ್ಣ, ಕಾರ್ಯದರ್ಶಿ ರಘುನಾಥ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ವಿ.ಶ್ರೀನಿವಾಸ್, ನಿವೃತ್ತ ಪ್ರಾಧ್ಯಾಪಕ ಡಾ.ವೈರಾಜರಾಮ್ ,ತಾಲೂಕು ಒಕ್ಕೂಟದ ಗೌರವಾಧ್ಯಕ್ಷ ಪ್ರೋ.ಡಿ.ಶಿವಣ್ಣ, ಮತ್ತಿತರರು ಇದ್ದರು.