Tuesday, November 5, 2024

Union Budget 2024: ಕೇಂದ್ರ ಬಜೆಟ್ ನಲ್ಲಿ ಬಿಜೆಪಿ ಕರ್ನಾಟಕಕ್ಕೆ ಚೆಂಬು ಕೊಟ್ಟಿದೆ ಎಂದ ಸಿಎಂ ಸಿದ್ದು….!

Union Budget 2024 ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಬಜೆಟ್ ಚೆಂಬು ನೀಡಿದೆ, ಕರ್ನಾಟಕಕ್ಕೆ ಪಂಗನಾಮ ಹಾಕಿದ್ದಾರೆ, ರಾಜ್ಯಕ್ಕೆ ಬಜೆಟ್ ನಲ್ಲಿ ಏನೂ ಕೊಟ್ಟಿಲ್ಲ.ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕವನ್ನು ಕಡೆಗಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ 2024 ರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ವಿಧಾನಸೌಧದಲ್ಲಿ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ಕೊಟ್ಟಿದ್ದಾರೆ. ಅವರ ಪ್ರಧಾನಮಂತ್ರಿ ಸ್ಥಾನ ಉಳಿಯಬೇಕು ಅಂದ್ರೆ ಆ ಎರಡು ರಾಜ್ಯಗಳು ಬೇಕು. ಅದಕ್ಕೆ ಅವರಿಗೆ ಕೊಟ್ಟಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. ನಿರ್ಮಲಾ ಸೀತಾರಾಮನ್ 48.21 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ 14.01 ಲಕ್ಷ ಕೋಟಿ ರೂ. ಅಷ್ಟು ಸಾಲ ತೆಗೆದುಕೊಳ್ತಿದ್ದಾರೆ. ಕರ್ನಾಟಕಕ್ಕೆ ನಿರಾಸೆಯಾಗಿದೆ. ರಾಜ್ಯದ ಜನರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರು (Bengaluru) ಪೆರಿಫೆರಲ್ ರಿಂಗ್ ರೋಡ್‌ಗೆ, ಜಲಮೂಲ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅವರೇ ಘೋಷಣೆ ಮಾಡಿದ್ದ ಹಣ ಕೊಟ್ಟಿಲ್ಲ. ಒಟ್ಟಾರೆಯಾಗಿ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಚೊಂಬು‌ ಕೊಟ್ಟಿದ್ದಾರೆ ಅಂತ ಕಿಡಿಕಾರಿದ್ದಾರೆ.

ಜೊತೆಗೆ ಈ ಸಂಬಂಧ ತಮ್ಮ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಎಂ ಸಿದ್ದರಾಮಯ್ಯ ಆಕ್ರೋಷ ಹೊರಹಾಕಿದ್ದಾರೆ. ಅವರ ಟ್ವೀಟ್ ನಲ್ಲಿರುವಂತೆ  ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಕೇಂದ್ರ ಸರ್ಕಾರದ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್  ಅವರೂ ಸೇರಿದಂತೆ ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ ಮಾಡಿಕೊಟ್ಟಿದ್ದರೂ ಇಂದು ಮಂಡಿಸಲಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಈ ಉದ್ದೇಶಪೂರ್ವ ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ, ಇದೇ ಜುಲೈ ತಿಂಗಳ 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾಗಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ.

Siddarmaaiah comments about budget 0

2024-25ರ ಸಾಲಿನ ಬಜೆಟ್ ನೋಡಿದ ನಂತರ ನಮಗೆ ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸವೇ ಹೊರಟುಹೋಗಿದೆ. ಬಜೆಟ್ ನಲ್ಲಿ ರೈತರ ಕಲ್ಯಾಣದ ಕಾಳಜಿ ವ್ಯಕ್ತಪಡಿಸಿರುವ ಹಣಕಾಸುವ ಸಚಿವರು ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾವವನ್ನೇ ಮಾಡಿಲ್ಲ. ಭದ್ರಾ ಮೇಲ್ದಂಡೆಗೆ ವಿಶೇಷ ನೆರವು ನೀಡುವ ತಮ್ಮದೇ ಭರವಸೆಯನ್ನೂ ಉಳಿಸಿಕೊಳ್ಳಲಿಲ್ಲ. ಕಳಸಾ -ಬಂಡೂರಿ ಯೋಜನೆಯನ್ನೂ ನಿರ್ಲಕ್ಷಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3ನೇ ಹಂತದ ಯೋಜನೆ ಮತ್ತು ಬೆಂಗಳೂರು ನಗರದ ಉದ್ದೇಶಿತ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಗತ್ಯ ಅನುಮತಿ ಮತ್ತು ಅನುದಾನವನ್ನೂ ನೀಡಿಲ್ಲ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸೂಚನೆ ಕೂಡಾ ಬಜೆಟ್ ನಲ್ಲಿ ಇಲ್ಲ. ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಸೂಕ್ಷ್ಮವಾಗಿ ಅವಲೋಕಸಿದರೆ ಬಿಜೆಪಿಯನ್ನು ತಿರಸ್ಕರಿಸಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ನರೇಂದ್ರ ಮೋದಿ ಅವರ ಸರ್ಕಾರ ನಿರ್ಧಾರ ಮಾಡಿದಂತಿದೆ.

ದೇಶದಲ್ಲಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿವೆ ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರ ಮರೆತಂತಿದೆ. ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸುರಿದಿರುವ ವಿಶೇಷ ಅನುದಾನದ ಸುರಿಮಳೆಯನ್ನು ನೋಡಿದರೆ ನರೇಂದ್ರ ಮೋದಿಯವರ ಲೆಕ್ಕಾಚಾರದಲ್ಲಿ ಆ ಎರಡು ರಾಜ್ಯಗಳು ಮಾತ್ರ ಅಸ್ತಿತ್ವದಲ್ಲಿರುವ ಹಾಗೆ ಕಾಣುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ. ಈ ಅನ್ಯಾಯವನ್ನು ಸಹಿಸಲಾಗದು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿರುವ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳ ಜೊತೆ ಸೇರಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಸೇಡಿನ ರಾಜಕಾರಣದ ವಿರುದ್ಧ ಹೋರಾಟ ನಡೆಸಲಾಗುವುದು. ಈ ಹೋರಾಟದಲ್ಲಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯದ ಜನತೆ ನಮ್ಮ ಜೊತೆ ನಿಲ್ಲಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!