ಕೇಂದ್ರ ಸರ್ಕಾರವು ರೈತರ ಆರ್ಥಿಕ ಬೆಂಬಲಕ್ಕಾಗಿ ಮತ್ತು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ‘ಪಿಎಂ ಕಿಸಾನ್’ (PM Kisan) ಯೋಜನೆಯಡಿ ಪ್ರತಿ ವರ್ಷ 6,000 ರೂ. ಆರ್ಥಿಕ ನೆರವು ನೀಡುವುದರ ಜೊತೆಗೆ ರಸಗೊಬ್ಬರ ಹಾಗೂ ಕೃಷಿ ಉಪಕರಣಗಳ ಮೇಲೂ ಸಬ್ಸಿಡಿ (Kisan Credit Card) ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್‌ಗಳ ಮೂಲಕ ರೈತರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಸರ್ಕಾರ ಮುಂದಾಗಿದೆ.

ಇದಕ್ಕಾಗಿ ‘ಬಡ್ಡಿ ರಿಯಾಯಿತಿ ಯೋಜನೆ’ಯನ್ನು (Interest Subvention Scheme) ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ರೈತರು ಯಾವುದೇ ಆಸ್ತಿ ಅಡಮಾನ (Collateral) ಇಲ್ಲದೆ 3 ಲಕ್ಷ ರೂ. ವರೆಗೆ ಸಾಲ ಪಡೆಯಬಹುದಾಗಿದೆ. ಹಾಗಾದರೆ, ಈ ಸಾಲ ಪಡೆಯಲು ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಬನ್ನಿ, ಇದರ ಸಂಪೂರ್ಣ ಮಾಹಿತಿ ತಿಳಿಯೋಣ.
Kisan Credit Card – ಯಾರಿಗೆಲ್ಲಾ ಈ ಯೋಜನೆ ಅನ್ವಯಿಸುತ್ತದೆ?
ರೈತರು ತಮ್ಮ ಕೃಷಿ ಮತ್ತು ಇತರೆ ತುರ್ತು ಅಗತ್ಯಗಳಿಗಾಗಿ ‘ಕಿಸಾನ್ ಕ್ರೆಡಿಟ್ ಕಾರ್ಡ್’ (KCC) ಮೂಲಕ 3 ಲಕ್ಷ ರೂ. ವರೆಗೆ ಸಾಲ ಪಡೆಯಬಹುದು. ನಿಮಗೆ ಯಾವಾಗ ಹಣದ ಅವಶ್ಯಕತೆ ಇರುತ್ತದೆಯೋ ಆಗ ಇದನ್ನು ಬಳಸಿಕೊಳ್ಳಬಹುದು. ಈ ಸಾಲಕ್ಕೆ ಕೇವಲ ಶೇ. 7ರಷ್ಟು ವಾರ್ಷಿಕ ಬಡ್ಡಿದರವಿರುತ್ತದೆ. ಒಂದು ವೇಳೆ ನೀವು ಪಡೆದ ಸಾಲವನ್ನು ನಿಗದಿತ ಸಮಯದೊಳಗೆ ಸರಿಯಾಗಿ ಮರುಪಾವತಿ ಮಾಡಿದರೆ, ಕೇಂದ್ರ ಸರ್ಕಾರದಿಂದ ವಿಶೇಷ ಬಡ್ಡಿ ರಿಯಾಯಿತಿ ಕೂಡ ಸಿಗಲಿದೆ.
ಕೇವಲ ಬೆಳೆ ಬೆಳೆಯುವ ರೈತರು ಮಾತ್ರವಲ್ಲದೆ, ಪಶುಸಂಗೋಪನೆ, ಹೈನುಗಾರಿಕೆ (ಡೈರಿ), ಕೋಳಿ ಸಾಕಾಣಿಕೆ ಮತ್ತು ಮೀನುಗಾರಿಕೆ ಮಾಡುವವರಿಗೂ ಈ ಯೋಜನೆ ಅನ್ವಯಿಸುತ್ತದೆ.
ಯೋಜನೆಯ ಪ್ರಮುಖ ಪ್ರಯೋಜನಗಳು
- ತಕ್ಷಣದ ಸಾಲ: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂ. ವರೆಗೆ ಇನ್ಸ್ಟಂಟ್ ಲೋನ್ (Instant Loan) ಲಭ್ಯವಿರುತ್ತದೆ.
- ಬಡ್ಡಿ ಮನ್ನಾ: ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಕೇಂದ್ರ ಸರ್ಕಾರದಿಂದ ಶೇ. 3ರಷ್ಟು ಬಡ್ಡಿ ಮನ್ನಾ ಮಾಡಲಾಗುತ್ತದೆ (ಅಂದರೆ ನಿಮಗೆ ಬೀಳುವ ಬಡ್ಡಿ ಕೇವಲ 4% ಮಾತ್ರ!).
- ವಿಶೇಷ ರಿಯಾಯಿತಿ: ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ಪಡೆಯುವ ಸಾಲಗಳ ಮೇಲೆ 2 ಲಕ್ಷ ರೂ. ವರೆಗಿನ ಮೊತ್ತಕ್ಕೆ ಬಡ್ಡಿ ರಿಯಾಯಿತಿ ಸೌಲಭ್ಯ ಸಿಗಲಿದೆ. Read this also : ‘ಪಿಎಂ ವಿಶ್ವಕರ್ಮ ಯೋಜನೆ’ (PM Vishwakarma Scheme) ಅಡಿಯಲ್ಲಿ ಸಿಗಲಿದೆ 3 ಲಕ್ಷದವರೆಗೆ ಸಾಲ ಮತ್ತು ತರಬೇತಿ!ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ

ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು?
- ವಯೋಮಿತಿ: ಅರ್ಜಿದಾರರ ವಯಸ್ಸು 18 ರಿಂದ 75 ವರ್ಷಗಳ ನಡುವೆ ಇರಬೇಕು.
- ಕೃಷಿ ಭೂಮಿ: ರೈತರು ಸ್ವಂತ ಕೃಷಿ ಭೂಮಿ ಹೊಂದಿರಬೇಕು ಮತ್ತು ಅದರಲ್ಲಿ ಸಕ್ರಿಯವಾಗಿ ವ್ಯವಸಾಯ ಮಾಡುತ್ತಿರಬೇಕು.
- ಇತರೆ ವೃತ್ತಿಗಳು: ಹೈನುಗಾರಿಕೆ, ಮೀನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಮಾಡುವ ರೈತರೂ ಸಹ ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
- ಗುಂಪು ಸಾಲ: ಸ್ವಸಹಾಯ ಸಂಘಗಳು (SHGs) ಮತ್ತು ಜಂಟಿ ಬಾಧ್ಯತಾ ಗುಂಪುಗಳು (JLGs) ಕೂಡ ಈ ಯೋಜನೆಯಡಿ ಸಾಲ ಪಡೆಯಬಹುದು.
- ಷರತ್ತು: ಗರಿಷ್ಠ 3 ಲಕ್ಷ ರೂ. ವರೆಗಿನ ಸಾಲದ ಮೊತ್ತಕ್ಕೆ ಮಾತ್ರ ಈ ಬಡ್ಡಿ ರಿಯಾಯಿತಿ ಅನ್ವಯವಾಗುತ್ತದೆ ಎಂಬುದನ್ನು ಗಮನದಲ್ಲಿಡಿ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಈ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಇರಬೇಕು:
- ಗುರುತಿನ ಚೀಟಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ವೋಟರ್ ಐಡಿ.
- ವಿಳಾಸ ದೃಢೀಕರಣ ಪತ್ರ: ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಅಥವಾ ಡ್ರೈವಿಂಗ್ ಲೈಸೆನ್ಸ್.
- ಭೂಮಿಯ ದಾಖಲೆಗಳು: ಪಹಣಿ (RTC), ಖಾತೆ ಉತಾರ ಮತ್ತು ಪಟ್ಟಾ ಪಾಸ್ ಬುಕ್.
- ಬ್ಯಾಂಕ್ ಖಾತೆ: ಆಕ್ಟೀವ್ ಇರುವ ಬ್ಯಾಂಕ್ ಅಕೌಂಟ್ ಪಾಸ್‌ಬುಕ್ ನಕಲು.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
- ಆಫ್‌ಲೈನ್ ಮೂಲಕ: ನೀವು ಈ ಸಾಲ ಪಡೆಯಲು ಬಯಸಿದರೆ, ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ‘ಕಿಸಾನ್ ಕ್ರೆಡಿಟ್ ಕಾರ್ಡ್’ (KCC) ಗಾಗಿ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ. ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಬ್ಯಾಂಕ್ ಸಿಬ್ಬಂದಿಗೆ ಸಲ್ಲಿಸಿ. ಬ್ಯಾಂಕ್ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ನಿಮಗೆ ಕಾರ್ಡ್ ಅನ್ನು ಜಾರಿ ಮಾಡುತ್ತಾರೆ.
- ಆನ್‌ಲೈನ್ ಮೂಲಕ: ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಬ್ಯಾಂಕಿಂಗ್ ಆ್ಯಪ್‌ಗಳ ಮೂಲಕವೂ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ: ಈ ಯೋಜನೆಯಡಿ ಬ್ಯಾಂಕ್‌ಗಳು ರೈತರಿಗೆ ‘ರುಪೇ ಕಾರ್ಡ್’ (RuPay Card) ಅನ್ನು ನೀಡುತ್ತವೆ. ಈ ಕಾರ್ಡ್ ಅನ್ನು ಬಳಸಿಕೊಂಡು ನಿಮಗೆ ಹಣದ ಅವಶ್ಯಕತೆ ಇದ್ದಾಗ ಎಟಿಎಂ ಮೂಲಕ ಬಹಳ ಸುಲಭವಾಗಿ ಹಣ ಡ್ರಾ ಮಾಡಿಕೊಳ್ಳಬಹುದು.

