ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಸಣ್ಣಪುಟ್ಟ ಕೆಲಸಗಳಿಗಾಗಿ, ಸಮಸ್ಯೆಗಳಿಗಾಗಿ ಚಪ್ಪಲಿ ಸವೆಸುವಂತೆ ಅಲೆದಾಡಿ ನಿಮಗೆ ಸುಸ್ತಾಗಿದೆಯೇ? ಹಾಗಾದರೆ ನಿಮಗೊಂದು ಭರ್ಜರಿ (Praja Seva Abhiyana) ಸಿಹಿಸುದ್ದಿ ಇದೆ. ಇನ್ನು ಮುಂದೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನೀವೇ ಕಚೇರಿಗಳಿಗೆ ಹೋಗಬೇಕಿಲ್ಲ, ಬದಲಾಗಿ ಸರ್ಕಾರವೇ ನಿಮ್ಮ ಮನೆಬಾಗಿಲಿಗೆ ಬರಲಿದೆ.
ಹೌದು, ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಜಾಸೇವಾ ಇಲಾಖೆ’ (Praja Seva Department) ಶನಿವಾರ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಲೋಕಾರ್ಪಣೆಗೊಂಡಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ಈ ನೂತನ ಇಲಾಖೆಗೆ ಚಾಲನೆ ನೀಡಿದ್ದಾರೆ. ಈ ಹೊಸ ಇಲಾಖೆಯ ಕೆಲಸವೇನು? ಜನರಿಗೆ ಇದರಿಂದ ಆಗುವ ಲಾಭಗಳೇನು? ಬನ್ನಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಪ್ರಜಾಸೇವಾ ಇಲಾಖೆ (Praja Seva Abhiyana) ಎಂದರೇನು? ಇದರ ಮುಖ್ಯ ಉದ್ದೇಶಗಳೇನು?
ಸಾರ್ವಜನಿಕರು ತಮ್ಮ ದಿನನಿತ್ಯದ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ಶಾಶ್ವತವಾಗಿ ತಪ್ಪಿಸುವುದು ಈ ಇಲಾಖೆಯ ಪ್ರಮುಖ ಗುರಿಯಾಗಿದೆ. ನೀವು ನೀಡುವ ದೂರುಗಳನ್ನು ಸ್ವೀಕರಿಸಿ, ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಅದಕ್ಕೆ ಪರಿಹಾರ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಾಗಲಿದೆ. ಸರ್ಕಾರಿ ಸೇವೆಗಳು ಹಾಗೂ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೇ ತಲುಪಿಸಲು ಈ ಇಲಾಖೆಯ ಅಡಿಯಲ್ಲಿ ʼಪ್ರಜಾಸೇವಾ ಅಭಿಯಾನʼ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ನಿಮ್ಮ ಊರಿನಲ್ಲೇ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಸಭೆಗಳ ವೇಳಾಪಟ್ಟಿ ಮತ್ತು ನಡೆಯುವ ವ್ಯವಸ್ಥೆ
ಪ್ರತಿ ಶನಿವಾರ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಜನಪ್ರತಿನಿಧಿಗಳ (Praja Seva Abhiyana) ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಸಾರ್ವಜನಿಕ ಸಭೆಗಳನ್ನು ನಡೆಸಲಾಗುತ್ತದೆ.
- 1 ಮತ್ತು 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ (ತಾಲೂಕು ಮಟ್ಟದಲ್ಲಿ) ಸಭೆ ನಡೆಯಲಿದೆ.
- 2 ಮತ್ತು 4ನೇ ಶನಿವಾರ: ಸ್ಥಳೀಯ ಶಾಸಕರ ನೇತೃತ್ವದಲ್ಲಿ (ತಾಲೂಕು/ಹೋಬಳಿ ಮಟ್ಟದಲ್ಲಿ) ಸಭೆಗಳು ಜರುಗಲಿವೆ. ಒಂದು ವೇಳೆ ಶಾಸಕರು ಉಪಸ್ಥಿತರಿಲ್ಲದಿದ್ದರೆ, ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ ಅಹವಾಲು ಸ್ವೀಕರಿಸಲಿದ್ದಾರೆ.

ಯಾವೆಲ್ಲಾ ಸಮಸ್ಯೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು?
ನಿಮ್ಮ ದೈನಂದಿನ ಬದುಕಿನ ಬಹುತೇಕ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಸ್ಪಂದನೆ ಸಿಗಲಿದೆ. ಆ ಪ್ರಮುಖ ಸೇವೆಗಳ ಪಟ್ಟಿ ಇಲ್ಲಿದೆ:
ಪರಿಹಾರ ಸಿಗುವ ಪ್ರಮುಖ ವಿಭಾಗಗಳು:
- ಕಂದಾಯ ಮತ್ತು ಆಸ್ತಿ: ಪಹಣಿ ಸಮಸ್ಯೆಗಳು, ಹೊಸ ಪಡಿತರ ಚೀಟಿ ವಿತರಣೆ, ವಸತಿ ಯೋಜನೆಗಳು.
- ಮೂಲಸೌಕರ್ಯ: ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ಕೆರೆ ತುಂಬಿಸುವ ಯೋಜನೆ.
- ಸಾಮಾಜಿಕ ಭದ್ರತೆ: ವಿವಿಧ ಪಿಂಚಣಿ ಯೋಜನೆಗಳು, ಗ್ಯಾರಂಟಿ ಯೋಜನೆಗಳ ಸೌಲಭ್ಯ.
- ಶಿಕ್ಷಣ ಮತ್ತು ಉದ್ಯೋಗ: ಖಾಸಗಿ ಉದ್ಯೋಗಾವಕಾಶಗಳು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿ.
- ಇತರೆ: ಪೊಲೀಸ್ ಸೇವೆಗೆ ಸಂಬಂಧಿಸಿದ ದೂರುಗಳು, ದೇವಸ್ಥಾನ ಜೀರ್ಣೋದ್ಧಾರ ಮತ್ತು ಊರಿನ ಇತರೆ ಯಾವುದೇ ಸ್ಥಳೀಯ ಸಮಸ್ಯೆಗಳು.
ಅರ್ಜಿ ಸಲ್ಲಿಸುವುದು ಹೇಗೆ? ಇದರ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?
ಇದೊಂದು ಸಂಪೂರ್ಣ ಹೈಟೆಕ್ ಮತ್ತು ಪಾರದರ್ಶಕ (Praja Seva Abhiyana) ವ್ಯವಸ್ಥೆಯಾಗಿದೆ.
- ಮನೆಗೇ ಬರಲಿದೆ ಅರ್ಜಿ: ಸಭೆ ನಡೆಯುವ 15 ದಿನಗಳ ಮೊದಲೇ ನಿಮ್ಮ ಮನೆ-ಮನೆಗೆ ಅರ್ಜಿ ನಮೂನೆಗಳನ್ನು ವಿತರಿಸಲಾಗುತ್ತದೆ.
- ಸ್ಥಳದಲ್ಲೇ ಆನ್‌ಲೈನ್ ಸಲ್ಲಿಕೆ: ನೀವು ಸ್ಥಳದಲ್ಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
- ತಂತ್ರಾಂಶದ ಬಳಕೆ: ನೀವು ನೀಡುವ ಎಲ್ಲಾ ಅರ್ಜಿಗಳು ‘ಐಜಿಪಿಆರ್‌ಎಸ್’ (IPGRS) ತಂತ್ರಾಂಶದ ಮೂಲಕ ನೇರವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನೆಯಾಗುತ್ತವೆ.
- ಮೂರು ಹಂತದ ಪರಿಶೀಲನೆ: ಪ್ರತಿ ಬುಧವಾರ ತಾಲೂಕು, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ 3 ಹಂತಗಳ ಪರಿಶೀಲನೆ ನಡೆಯುತ್ತದೆ.
- ಸ್ವಯಂಚಾಲಿತ ವರ್ಗಾವಣೆ: ನಿಗದಿತ ಅವಧಿಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ನಿಮ್ಮ ಅರ್ಜಿಯು ತಾನಾಗಿಯೇ (Automated) ಮೇಲಧಿಕಾರಿಗಳ ಖಾತೆಗೆ ವರ್ಗಾವಣೆಯಾಗುತ್ತದೆ. Read this also : ಸ್ಮಾರ್ಟ್‌ಫೋನ್ ಇದೆಯಾ? ಹಾಗಾದರೆ ನಿಮ್ಮ ಫೋನ್‌ನಲ್ಲಿ ಈ 5 ಸರ್ಕಾರಿ ಆ್ಯಪ್‌ಗಳು ಇರಲೇಬೇಕು!
ಸಹಾಯವಾಣಿ ಮತ್ತು ಹೆಚ್ಚಿನ ಮಾಹಿತಿಗಾಗಿ
ನಾಗರಿಕರಿಗೆ ಮಾಹಿತಿ ತಲುಪಿಸಲು ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಾಲ್ ಸೆಂಟರ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ.
- ಟೋಲ್-ಫ್ರೀ ಸಹಾಯವಾಣಿ (Helpline): 1902
- ಅಧಿಕೃತ ವೆಬ್‌ಸೈಟ್: karnataka.gov.in
“ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ”: ಸಿಎಂ
ಪ್ರಜಾಸೇವಾ ಇಲಾಖೆಗೆ (Praja Seva Abhiyana) ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾವುಕ ನುಡಿಗಳನ್ನಾಡಿದರು.

“ನಮ್ಮ ದೇಶದಲ್ಲಿ ಪ್ರಭುಗಳ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ. ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ ನನಗೆ ಅತೀವ ಸಂತೋಷವಾಗುತ್ತದೆ,” ಎಂದರು.
ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಿರುವುದಿಲ್ಲ. ಇದೇ ಕಾರಣಕ್ಕೆ ಸರ್ಕಾರದ ಆಡಳಿತವೇ ಜನರ ಮನೆಬಾಗಿಲಿಗೆ ಬರಬೇಕು ಎನ್ನುವ ಪವಿತ್ರ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಯಾವುದೇ ರಾಜಕೀಯ, ಧರ್ಮ-ಜಾತಿ ಭೇದವಿಲ್ಲದೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
