ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ಯುವಕನೊಬ್ಬನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೃತನನ್ನು ಹಂಪಸಂದ್ರ ನಿವಾಸಿ, ಆಟೋ ಚಾಲಕ ಗಗನ್ ಶಂಕರ್ (27) ಎಂದು ಗುರುತಿಸಲಾಗಿದೆ. ಈ ಸಾವು ಆತ್ಮಹತ್ಯೆಯೋ ಅಥವಾ ಪೂರ್ವನಿಯೋಜಿತ ಕೊಲೆಯೋ ಎಂಬ ಅನುಮಾನ ಹುಟ್ಟುಹಾಕಿದ್ದು, ಮೃತ ಯುವಕನ ಸಂಬಂಧಿಕರು ಇದೊಂದು ಕೊಲೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Crime – ಘಟನೆಯ ವಿವರ
ಮೃತ ಗಗನ್ ಶಂಕರ್ ಮತ್ತು ಅದೇ ಗ್ರಾಮದ ನಿವಾಸಿ ವೆನ್ನೆಲ ಎಂಬುವವರ ನಡುವೆ ಕಳೆದ ಕೆಲವು ವರ್ಷಗಳಿಂದ ಪರಿಚಯವಿತ್ತು. ಇದು ಕೇವಲ ಸ್ನೇಹವೋ ಅಥವಾ ಅಕ್ರಮ ಸಂಬಂಧವೋ ಎಂಬ ಬಗ್ಗೆ ಗ್ರಾಮದಲ್ಲಿ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಗಗನ್ ಶಂಕರ್ ತನ್ನ ಮನೆಗೆ ಹೊಸ ಸೋಫಾ ಸೆಟ್ ತಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಲು ಸೋಮವಾರ (ಡಿ.08) ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ ವೆನ್ನೆಲ, ಗಗನ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ. ಆಗ ವೆನ್ನೆಲ ಮತ್ತು ಆಕೆಯ ಪತಿ ದೇವರಾಜು ಸೇರಿ ಗಗನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಮೃತನ ಸಂಬಂಧಿಕರು ದೂರಿತ್ತಿದ್ದಾರೆ.
Crime – ಕೆರೆಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ಯತ್ನ
ಮೈಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಉರಿಯ ತೀವ್ರತೆ ತಾಳಲಾರದೆ ಗಗನ್ ಮನೆಯಿಂದ ಓಡಿಹೋಗಿ ಸಮೀಪದ ಕೆರೆಗೆ ಹಾರಿದ್ದಾನೆ. ಬೆಂಕಿ ನಂದಿದ ನಂತರ ಕೆರೆಯ ಏರಿಯ ಮೇಲೆ ಬಿದ್ದಿದ್ದಾಗ, ತನ್ನ ಸಂಬಂಧಿಕರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದಾನೆ. “ನನಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ, ಉರಿ ತಡೆಯಲಾಗದೆ ಕೆರೆಯಲ್ಲಿ ಮುಳುಗಿ ಈಗ ಏರಿಯ ಮೇಲೆ ಮಲಗಿದ್ದೇನೆ,” ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Crime – ಚಿಕಿತ್ಸೆ ಫಲಕಾರಿಯಾಗದೆ ಸಾವು
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು, ಗಗನ್ ಶಂಕರ್ ನನ್ನು ರಕ್ಷಿಸಿ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗಗನ್ ಶಂಕರ್ ಮಂಗಳವಾರ ಮೃತಪಟ್ಟಿದ್ದಾನೆ. Read this also : ಅಯ್ಯೋ ದೇವ್ರೇ.. ಪ್ರಿಯಕರನ ಪತ್ನಿ ಬಂದ್ಲು ಅಂತ 10ನೇ ಮಹಡಿಯಿಂದ ನೇತಾಡಿದ ಯುವತಿ! ಮುಂದೇನಾಯ್ತು ಗೊತ್ತಾ?

Crime – ಆರೋಪಿಗಳು ಪರಾರಿ?
ಗಗನ್ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳಾದ ವೆನ್ನೆಲ ಮತ್ತು ದೇವರಾಜ್ ಕುಟುಂಬ ಸಮೇತ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಇತ್ತ ಘಟನೆ ನಡೆದ ಮನೆಯ ಕಿಟಕಿ, ಟಿವಿ ಸೇರಿದಂತೆ ಹಲವು ಸಾಮಗ್ರಿಗಳನ್ನು ಯಾರೋ ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
