Friday, November 22, 2024

ಗೋಮಾಳ ಜಮೀನು ಕಬಳಿಕೆಯನ್ನು ನಿಯಂತ್ರಿಸಲು ಗ್ರಾಮಸ್ಥರ ಆಗ್ರಹ, ಧರಣಿ ಮಾಡುವ ಎಚ್ಚರಿಕೆ…!

ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಬಿಗೇಮರದಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರದ ಗೋಮಾಳ ಜಮೀನನ್ನು ಕೆಲ ಭೂಗಳ್ಳರು ಕಬಳಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಕ್ರಮ ವಹಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

Jambigemaradahalli land issue 2

ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೇಮರದಹಳ್ಳಿ ಗ್ರಾಮದ ಸ.ನಂ. 130ರಲ್ಲಿ ಸುಮಾರು 98 ಎಕರೆ 37 ಗುಂಟೆ ಜಮೀನಿನ ಪೈಕಿ ಮಂಜೂರಾಗಿರುವ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 150ಕ್ಕೂ ಮೇಲ್ಪಟ್ಟು ಮನೆಗಳಿದ್ದು, ಈ ಪೈಕಿ ಬಹುತೇಕರು ಜಾನುವಾರುಗಳನ್ನು ಮೇಯಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಬೇರೆ ಎಲ್ಲಿಯೂ ತಮ್ಮ ಜಾನುವಾರುಗಳನ್ನು ಮೇಯಿಸಲು ಜಾಗವಿರುವುದಿಲ್ಲ. ಆದ್ದರಿಂದ ಇದೇ ಗೋಮಾಳ ಜಮೀನನ್ನು ನಂಬಿಕೊಂಡಿದ್ದಾರೆ. ಆದರೆ ಕೆಲವು ಭೂಗಳ್ಳರು, ಪಟ್ಟಭದ್ರ ಹಿತಾಸಕ್ತಿಗಳು ಗಣಿಗಾರಿಕೆಯ ಮೂಲಕ ಜಮೀನನ್ನು ಕಬಳಿಸಲು ಹುನ್ನಾರ ಹೂಡಿದೆ ಎಂಬ ಮಾಹಿತಿ ಸಿಕ್ಕಿದೆ. ಒಂದು ವೇಳೆ ಇದು ಸತ್ಯವಾದರೇ ಗ್ರಾಮದ ಜಾನುವಾರುಗಳಿಗೆ ಮೇವಿಲ್ಲದೇ ಗ್ರಾಮಸ್ಥರು ಜೀವನ ನಡೆಸಲು ಕಷ್ಟಕರವಾಗುತ್ತದೆ. ಇದರ ಜೊತೆಗೆ ಗೋಮಾಳದ ಹತ್ತಿರದಲ್ಲೇ ಕುಡಿಯುವ ನೀರಿನ ಕುಂಟೆಯೊಂದಿದೆ. ಈ ಕುಂಟೆಯ ನೀರನ್ನು ಗ್ರಾಮಸ್ಥರು ಬಳಸುತ್ತಾರೆ. ಈ ಭಾಗದಲ್ಲಿ ಗಣಿಗಾರಿಕೆಗಳು ಆರಂಭವಾದರೇ ನೀರು, ಪರಿಸರ ಮಾಲಿನ್ಯವಾಗಿ ಸಾಂಕ್ರಾಮಿಕ ರೋಗಗಳಿಗೆ ಇಡೀ ಗ್ರಾಮವೇ ತುತ್ತಾಗಬೇಕಾಗುತ್ತದೆ. ಆದ್ದರಿಂದ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Jambigemaradahalli land issue 0

ಈ ಸಮಯದಲ್ಲಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಗೌಡ ಮಾತನಾಡಿ, ಜಂಬಿಗೇಮರದಹಳ್ಳಿ ಗ್ರಾಮದ ಗೋಮಾಳ ಜಮೀನಿನಲ್ಲಿ ಸುಮಾರು ವರ್ಷಗಳಿಂದ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮೇಯಿಸಿಕೊಳ್ಳುತ್ತಿದ್ದಾರೆ. ಕೆಲವು ಗ್ರಾಮಸ್ಥರು ಅಕ್ರಮ ಸಕ್ರಮದಲ್ಲಿ ಕೊಂಚ ಜಮೀನನ್ನು ಮಂಜೂರು ಮಾಡಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಉಳಿದ ಜಮೀನು ಬೀಳಾಗಿದ್ದು, ಇಲ್ಲಿ ಗಿಡಮರಗಳು ಬೆಳೆದು, ಜಿಂಕೆ, ನವಿಲು ಸೇರಿದಂತೆ ಕೆಲವೊಂದು ಕಾಡುಪ್ರಾಣಿಗಳು ವಾಸ ಮಾಡುತ್ತಿವೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಭಾವ ಬಳಸಿ ಗಣಿಗಾರಿಕೆಗಾಗಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಕೂಡಲೇ ತಾಲೂಕು ಆಡಳಿತ ಸಂಬಂಧಪಟ್ಟ ಗೋಮಾಳ ಜಾಗವನ್ನು ಸರ್ವೆ ಮಾಡಿಸಿ, ಗಣಿಗಾರಿಕೆಗೆ ಅವಕಾಶ ನೀಡದೇ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ 2020 ರಿಂದಲೂ ಈ ಬಗ್ಗೆ ಅರ್ಜಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಗೋಮಾಳ ಜಮೀನಿನ ಸುತ್ತಮುತ್ತಲಿನಲ್ಲಿ ಕೆಲವರು ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡುತ್ತಿದ್ದಾರೆ. ಜಾನುವಾರುಗಳು ಗೋಮಾಳಕ್ಕೆ ಹೋಗದಂತೆ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಈ ಕುರಿತು ಕ್ರಮ ವಹಿಸಿ ಗೋಮಾಳವನ್ನು ರಕ್ಷಿಸಬೇಕು. ಇಲ್ಲವಾದಲ್ಲಿ ನಮ್ಮ ವೇದಿಕೆಯ ಮೂಲಕ ಅಹೋರಾತ್ರಿ ಧರಣಿ ಮಾಡಲು ಸಹ ನಾವು ಸಿದ್ದವಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

Jambigemaradahalli land issue 1

ಈ ವೇಳೆ ಗುಡಿಬಂಡೆ ತಹಸೀಲ್ದಾರ್‍ ಮನೀಷಾ ರವರಿಗೆ  ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮನವಿ ಪತ್ರವನ್ನು ಸಲ್ಲಿಸಿದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!