E-Khata ಅನಧಿಕೃತ ಸ್ವತ್ತುಗಳ ಮಾಲೀಕರ ಅನುಕೂಲಕ್ಕಾಗಿ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಮಾ.2ರ ಭಾನುವಾರ ಬಾಗೇಪಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಅಭಿಯಾನದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಆದೇಶದ ಮೇರೆಗೆ ಬಾಗೇಪಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಅನಧಿಕೃತ ಸ್ವತ್ತುಗಳ (ಬಿ–ಖಾತಾ) ಮಾಲೀಕರು ತಮ್ಮ ಸ್ವತ್ತಿನ ಕಂದಾಯ ಪಾವತಿಸುವುದು ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಇ–ಖಾತಾ ಪಡೆಯಬಹುದಾಗಿದೆ ಎಂದರು.
ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳು, ಮನೆಯ ಆಸ್ತಿಗಳು, ಖಾಲಿ ನಿವೇಶನ ಹೊಂದಿರುವವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ–ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ, ಮಧ್ಯವರ್ತಿಗಳನ್ನು ನಂಭಿ ಮೋಸ ಹೋಗಬೇಡಿ, ನೇರವಾಗಿ ಸಾರ್ವಜನಿಕರೇ ಪುರಸಭೆ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಇ–ಖಾತಾ ಪಡೆದುಕೊಳ್ಳಬೇಕು. ಸರ್ಕಾರದ ಆದೇಶದಂತೆ ವಿಲಂಭ ಮಾಡದೆ ಅನಧಿಕೃತ ಸ್ವತ್ತುಗಳ ಮಾಲೀಕರಿಗೆ ಸರ್ಕಾರ ನೀಡಿರುವ ಅವಧಿಯೊಳಗೆ ಇ- ಖಾತಾ ಮಾಡಿಸಿಕೊಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಸ್ವತ್ತಿನ ಮಾಲೀಕರು ಪುರಸಭೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ ಹಾಗೂ ಮಾಲೀಕರ ಪೊಟೋ, ಆಧಾರ್ ಕಾರ್ಡ್ ಸಲ್ಲಿಸಿ ಇ–ಖಾತಾ ಪಡೆಯಬಹುದಾಗಿದೆ ಎಂದ ಅವರು ಇ ಖಾತಾ ಅಭಿಯಾನ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷ ಸುಜಾತ ನರಸಿಂಹ ನಾಯ್ಡು ಮತ್ತಿತರರು ಇದ್ದರು.