Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಜೀತದಾಳುಗಳನ್ನು ಮುಖ್ಯವಾಹಿನಿಗೆ ತರಲು ಹಾಗೂ ಜೀತದಾಳುಗಳನ್ನು ಬಿಡುಗಡೆಗೊಳಿಸಲು ಶ್ರಮಿಸಿದಂತಹ ಜೀವಿಕ ನಾರಾಯಣಸ್ವಾಮಿ ಯವರಿಗೆ 76ನೇ ಗಣರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಸಂಬಂಧ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮುಖಂಡ ಬಾಲೇನಹಳ್ಳಿ ರಮೇಶ್ ಮಾತನಾಡಿ, ಜೀವಿಕ ನಾರಾಯಣಸ್ವಾಮಿಯವರು ಅತ್ಯಂತ ಸರಳಜೀವಿ. ಸುಮಾರು 20 ವರ್ಷಗಳಿಂದ ದಲಿತ ಪರ, ಜೀತದಾಳುಗಳ ಪರ ಕೆಲಸ ಮಾಡುತ್ತಿರುವಂತಹ ವ್ಯಕ್ತಿ. ಈಗಾಗಲೇ ಅವರು ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅವರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರಿಗೆ ಪ್ರಶಸ್ತಿಯ ದೊರೆಯಲು ಶ್ರಮಿಸಿದಂತಹ ಸ್ಥಳೀಯ ಶಾಸಕರಿಗೂ ಹಾಗೂ ಜಿಲ್ಲಾಡಳಿತಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜೀವಿಕ ನಾರಾಯಣಸ್ವಾಮಿ, ಜೀತ, ಬಾಲಕಾರ್ಮಿಕರು, ವರದಕ್ಷಿಣೆ, ಸಾವಯವ ಕೃಷಿ, ಆರೋಗದ ಬಗ್ಗೆ ಅಸ್ಪೃಶ್ಯತೆ ನಿರ್ಮೂಲನೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸುತ್ತಾ, ಒಬ್ಬ ತಮಟೆ ಕಲಾವಿದನಾಗಿ ದೆಹಲಿ, ಮುಂಬೈ ಮತ್ತು ರಾಜ್ಯ ಜಾನಪದ ಜಾತ್ರೆಗಳಲ್ಲಿ ರಾಷ್ಟ್ರೀಯ ಹಬ್ಬಗಳಲ್ಲಿ ತಮಟೆ ಹೊಡೆತ ಮತ್ತು ನೃತ್ಯವನ್ನು ಪ್ರರ್ದಶಿಸುತ್ತಾ ಸುಮಾರು 10 ವರ್ಷಗಳಿಂದ ತಮಟೆ ಹಬ್ಬವನ್ನು ಮಾಡಿಕೋಡು ಬರುತ್ತಿದ್ದೇನೆ. ನನಗೆ ಈಗಾಗಲೇ ನೀಡುಮಾಮಿಡಿ ಮಠದಿಂದ ಸದ್ಭಾವನಾ ಪ್ರಶಸ್ತಿ, ತಮಿಳುನಾಡಿನ ಗ್ಲೋಬಲ್ ಡ್ಯೂಮನ್ ಪೀಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದ್ದು, ಇದೀಗ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಅವಾರ್ಡ್ ದೊರೆತಿದೆ. ಇದೀಗ ನನಗೆ ಗಣರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷಕರವಾಗಿದೆ ಎಂದರು.
ಈ ವೇಳೆ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾವಜೇನಹಳ್ಳಿ ನಾಗರಾಜರೆಡ್ಡಿ, ಬೀಚಗಾನಹಳ್ಳಿ ಮಾಜಿ ಗ್ರಾ.ಪಂ ಅಧ್ಯಕ್ಷ ನರಸಪ್ಪ, ರೈತ ಮುಖಂಡ ನಂದೀಶ್ ಸೇರಿದಂತೆ ಹಲವರು ಇದ್ದರು.