ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು, ವರ್ಷದ 365 ದಿನವೂ ಪರಿಸರ ಪ್ರಜ್ಞೆ ಹೊಂದಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರವನ್ನು ಉಳಿಸಿ ಬೆಳಸಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಶಂಕರಪ್ಪ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಕಾರಣ ಭೂಮಿಯ ಮೇಲೆ ಜೀವ ವಿರುವ ಪ್ರತಿಯೊಂದು ಜೀವರಾಶಿಗೆ ಆಹಾರಕ್ಕಿಂತ ಮೊದಲು ಗಾಳಿ ಅತ್ಯವಶ್ಯಕವಾಗಿದೆ ಎಂದರು. ಕೊರೋನಾ ಸಂದರ್ಭದಲ್ಲಿ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಒದ್ದಾಡಿದ್ದನ್ನು ಒಮ್ಮೆ ನೆನಪಿಸಿಕೊಂಡರೆ ಗಿಡ ಮರಗಳ ಮಹತ್ವ ತಿಳಿಯುತ್ತದೆ. ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ದಿನದ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿಯಬೇಕು. ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸುವಂತ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ನಂತರ ಕಾಲೇಜಿನ ಉಪನ್ಯಾಸಕಿ ಕೆ. ಆರ್.ಕಲಾವತಿ ಮಾತನಾಡಿ 1974 ರಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚಿಸಲಾಗುತ್ತದೆ, ಮನುಷ್ಯನ ಜೀವನದಲ್ಲಿ ಪರಿಸರ ಎಷ್ಟು ಮುಖ್ಯ ಮತ್ತು, ಅದನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಈ ದಿನದ ಉದ್ದೇಶ, ಪ್ರತಿ ವರ್ಷ ಒಂದೊಂದು ಥೀಮ್ ಇಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರಕ್ಕೆ ತೀವ್ರ ಹಾನಿಯುಂಟಾಗುತ್ತಿದೆ. ಅಲ್ಲದೆ ನಿಸರ್ಗ, ವನ್ಯಜೀವಿ ಮತ್ತು ಸಸ್ಯ ಸಂಕುಲಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು ಹಾಗೂ ತಲಾ ಒಂದೊಂದು ಗಿಡವನ್ನು ದತ್ತು ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀನಿವಾಸ್, ಮುನಿಕೃಷ್ಣ, ಶೀತಲ್ ಸುಪ್ರಿಯಾ, ಅದಿನಾರಾಯಣರೆಡ್ಡಿ, ಸುವರ್ಣ ಗೌರಿ ಮತ್ತು ಶಿವರಾಜ್ ಕುಮಾರ್ ಉಪಸ್ಥಿತರಿದ್ದರು.