ಗುಡಿಬಂಡೆ: ಮುಂದಿನ ಪೀಳಿಗೆ ಉಳಿಯಬೇಕಾದರೇ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು, ಅದರಲ್ಲೂ ಯುವಜನತೆ ತಾವು ಪರಿಸರ ಸಂರಕ್ಷಣೆಗೆ ಮುಂದಾಗುವುದರ ಜೊತೆಗೆ ಇತರರನ್ನು ಪರಿಸರ ಸಂರಕ್ಷಣೆ ಮಾಡಲು ಪ್ರೇರೇಪಿಸಬೇಕು ಎಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ತಾಲೂಕು ಆಡಳಿತ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ದಿನೇ ದಿನೇ ವೇಗವಾಗಿ ನಗರೀಕರಣ ಬೆಳೆಯುತ್ತಿದೆ. ಜೊತೆಗೆ ವಾಹನಗಳೂ ಸಹ ಹೆಚ್ಚಾಗುತ್ತಿದೆ. ಇದರಿಂದಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಕಾಡುಗಳು ನಾಶವಾಗುತ್ತಿದೆ. ಇದರಿಂದಾಗಿ ಅರಣ್ಯದಲ್ಲಿ ಜೀವಿಸುವ ವನ್ಯ ಜೀವಿಗಳು ನಾಡಿಗೆ ಬಂದು ಪ್ರಾಣ ಕಳೆದುಕೊಳ್ಳುತ್ತಿದೆ. ಅಷ್ಟೇಅಲ್ಲದೇ ಕಾಡು ನಾಶವಾಗುತ್ತಿರುವ ಕಾರಣದಿಂದ ಅತಿವೃಷ್ಟಿ, ಅನಾವೃಷ್ಟಿಗಳೂ ಸಹ ಸಂಭವಿಸುತ್ತಿವೆ. ನಾವೆಲ್ಲರೂ ಒಂದಾಗಿ ಪರಿಸರವನ್ನು ಸಂರಕ್ಷಣೆ ಮಾಡದೇ ಇದ್ದರೇ ಮುಂದಿನ ಪೀಳಿಗೆ ಉಳಿಯುವುದು ಕಷ್ಟ ಎಂದರು.
ಇನ್ನೂ ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಅಪಾರವಾಗಿದ್ದು, ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ಪರಿಸರ ಸಂರಕ್ಷಣೆ ಕೇವಲ ಇಲಾಖೆಗಳ ಕೆಲಸ ಎಂದು ಭಾವಿಸದೇ ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಬೇಕು. ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಬೇಕು. ಅರಣ್ಯ ಇಲಾಖೆ ಸಹ ಶಾಲಾ-ಕಾಲೇಜುಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಈ ಸಮಯದಲ್ಲಿ ತಹಸೀಲ್ದಾರ್ ಮನಿಷಾ, ತಾ.ಪಂ. ಇಒ ಹೇಮಾವತಿ, ವಲಯ ಅರಣ್ಯ ಇಲಾಖೆಯ ಪೂರ್ಣಿಕಾರಾಣಿ, ಕನಕರಾಜು, ಸರ್ಕಾರಿ ನೌಕರರ ಸಂಘದ ನಾರಾಯಣಸ್ವಾಮಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟರಾಮ್, ಉಪನ್ಯಾಸಕರಾದ ಪ್ರೊ.ಕೃಷ್ಣಪ್ಪ, ಪ್ರೊ. ನಯಾಜ್, ಮುಖಂಡರು ಸೇರಿದಂತೆ ಹಲವರಿದ್ದರು.