Viral News- ವಯಸ್ಸಿಗೆ ಬಂದವರು ಮದುವೆಯಾಗಲು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ತಮ್ಮ ಮಕ್ಕಳಿಗೆ ಮದುವೆ ಮಾಡಿಸಲು ಹರಸಾಹಸ ಪಡುತ್ತಿರುತ್ತಾರೆ. ಆದರೆ ಕೆಲ ಖದೀಮರು ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಮದುವೆಯ ಹೆಸರಿನಲ್ಲಿ ವಂಚನೆ ಮಾಡುತ್ತಿರುವಂತಹ ಘಟನೆಗಳು ಹೆಚ್ಚಾಗುತ್ತಿದೆ. ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಮದುವೆ ಮಂಟಪದಲ್ಲಿಯೇ ಮದುವೆಗಳು ಮುರಿದು ಬಿದ್ದಿರುವಂತಹ ಘಟನೆಗಳ ನಡುವೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆಯ ಶಾಸ್ತ್ರಗಳು ನಡೆಯುತ್ತಿರುವಾಗಲೇ ಬಾತ್ ರೂಂ ಗೆ ಹೋಗಿಬರುತ್ತೇನೆ ಎಂದು ವಧು ಹೋಗಿದ್ದಾಳೆ. ಆದರೆ ಸಾಕಷ್ಟು ಸಮಯ ಕಾದರೂ ವಧು ಬರೇ ಇಲ್ಲ. ಬಳಿಕ ಅಸಲಿ ಸತ್ಯ ತಿಳಿದ ವರ ಶಾಕ್ ಆಗಿದ್ದಾನೆ.
ಸಂತೋಷದಿಂದ ಮದುವೆಯಾದ ವರ ತನ್ನ ಹೆಂಡತಿಯೊಂದಿಗೆ ಸಂತೋಷದಿಂದ ಜೀವನ ಸಾಗಿಸಲು ಕನಸುಗಳನ್ನು ಕಾಣುತ್ತಿದ್ದ ಸಮಯದಲ್ಲಿ ಆತನಿಗೆ ಬರಸಿಡಿಲು ಬಡಿದಂತಾಗಿದೆ. ಉತ್ತರ ಪ್ರದೇಶದ ಗೋರಖ್ ಪುರದ ಸೀತಾಪುರ ಜಿಲ್ಲೆಯ ಗೋವಿಂದ ಪುರ ಗ್ರಾಮದ ರೈತ ಕಮಲೇಶ್ ಎಂಬಾತ ತನ್ನ ಪತ್ನಿಯ ಮರಣದ ನಂತರ ಎರಡನೇ ಮದುವೆಗೆ ಸಿದ್ದನಾಗಿದ್ದ. ಹುಡುಗಿಯನ್ನು ಹುಡುಕುವ ಸಲುವಾಗಿ 30 ಸಾವಿರ ರೂಪಾಯಿ ದಳ್ಳಾಳಿಯೊಬ್ಬರಿಗೆ ನೀಡಿದ್ದ. ಅದೇ ದಲ್ಲಾಳಿಯ ಮೂಲಕವೇ ಹೆಣ್ಣನ್ನು ಸಹ ನೋಡಿ ಎರಡೂ ಮನೆಯವರೂ ಮದುವೆಗೆ ಒಪ್ಪಿ ಮದುವೆ ಸಹ ಮಾಡಿಸಿದ್ದಾರೆ.
ಕಳೆದ ಶುಕ್ರವಾರ ಗೋರಖ್ ಪುರದ ಖಜ್ನಿ ಪ್ರದೇಶದ ಭರೋಹಿಯಾದಲ್ಲಿರುವ ಶಿವನ ದೇವಾಲಯದಲ್ಲಿ ಅವರ ಮದುವೆ ನಡೆಸಲು ಸಿದ್ದತೆಗಳನ್ನು ನಡೆಸಲಾಗಿತ್ತು. ಮದುವೆಯ ನಿಮಿತ್ತ ವಧು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಬಂದಿದ್ದರು. ಕಮಲೇಶ್ ಸಹ ಅವರ ಕುಟುಂಬದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದರು. ಇನ್ನೇನು ಮದುವೆ ಶಾಸ್ತ್ರಗಳು ಶುರುವಾಗಿತ್ತು. ಇದೇ ಸಮಯದಲ್ಲೇ ವಧು ಬಾತ್ ರೂಂ ಗೆ ಹೋಗಬೇಕೆಂದು ಕೇಳಿದ್ದಾಳೆ. ಈ ಸಮಯದಲ್ಲಿ ವಧು ಜೊತೆಗೆ ಆಕೆಯ ತಾಯಿಯನ್ನು ಕಳುಹಿಸಲಾಗಿತ್ತು. ಇನ್ನೂ ಬಾತ್ ರೂಂ ಗೆ ಹೋದ ವಧು ಸಾಕಷ್ಟು ಸಮಯವಾದರೂ ವಾಪಸ್ ಬರಲೇ ಇಲ್ಲ. ನಂತರ ಏನಾಗಿದೆಯೋ ಎಂದು ವರನ ಕಡೆಯವರು ಹೋಗಿ ನೋಡಿದಾಗ ಅಸಲೀ ಸತ್ಯ ಹೊರಬಂದಿದೆ.
ಇನ್ನೂ ಮದುವೆಯಾಗುವ ಖುಷಿಯಲ್ಲಿದ್ದ 40 ವರ್ಷ ಕಮಲೇಶ್, ಮದುವೆ ನಿಶ್ಚಯವಾದ ನಂತರ ತಾನು ಮದುವೆಯಾಗುವಂತಹ ಯುವತಿಗೆ ಸೀರೆ, ಒಡವೆ ಹಾಗೂ ಕೆಲವೊಂದು ವಸ್ತುಗಳನ್ನು ಕೊಡಿಸಿದ್ದಾನೆ. ಜೊತೆಗೆ ಒಳ್ಳೆಯ ಪೋನ್ ಸಹ ಕೊಡಿಸಿದ್ದಾನೆ. ಇದೆಲ್ಲದರ ಜೊತೆಗೆ ಮದುವೆಯ ವೆಚ್ಚವನ್ನು ಸಹ ಕಮಲೇಶ್ ಭರಿಸಿದ್ದ. ಆದರೆ ಎಲ್ಲವನ್ನೂ ಕದ್ದು ವಧು ಪರಾರಿಯಾಗಿದ್ದಾಳೆ. ಇನ್ನೂ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದ್ದು, ಒಂದು ವೇಳೆ ದೂರು ದಾಖಲಿಸಿದರೇ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.