Valmiki Community – ರಾಜ್ಯ ಸರ್ಕಾರ ಮುಂದುವರೆದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಮೂಲಕ ಪರಿಶಿಷ್ಟ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಈ ನಿರ್ಧಾರ ಹಿಂಪಡೆಯದೇ ಇದ್ದರೇ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸರಿಯಾದ ಪಾಠವನ್ನು ನಮ್ಮ ಸಮುದಾಯ ಕಲಿಸಲಿದೆ ಎಂದು ವಾಲ್ಮೀಕಿ ಸಮುದಾಯ ಮುಖಂಡ ಆನಂದ್ ಎಚ್ಚರಿಕೆ ನೀಡಿದರು.

Valmiki Community – ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಏಕೆ ಬೇಕು?
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ವಾಲ್ಮೀಕಿ ಸಂಘದ ವತಿಯಿಂದ ಎಸ್.ಟಿ. ವರ್ಗಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಸರ್ಕಾರ ನಿರ್ಧಾರದ ವಿರುದ್ದ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆಯ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರ ಪರಿಶಿಷ್ಟ ವರ್ಗಗಳ ಮೇಲೆ ದುರುದ್ದೇಶ ಹೊಂದಿದೆ. ಈ ಕಾರಣದಿಂದಲೇ ಇಲ್ಲ ಸಲ್ಲದ ಕೆಲಸಗಳನ್ನು ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ ವರದಿಯನ್ನು ಮತ್ತೆ ಜಾರಿಗೆ ಮಾಡಲು ಮುಂದಾಗುತ್ತಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಸಿದ್ದತೆಗಳನ್ನು ಮಾಡುತ್ತಿದ್ದಾರೆ.
ಈಗಾಗಲೇ ಶೇ.18 ರಷ್ಟು ಮೀಸಲಾತಿ ಪಡೆದುಕೊಳ್ಳುತ್ತಿರುವ ಕುರುಬ ಸಮಾಜವನ್ನು ಎಸ್.ಟಿ. ವರ್ಗಕ್ಕೆ ಸೇರಿಸಬೇಕಾದ ಅನಿವಾರ್ಯವಾದರೂ ಏನು? ಕುರುಬ ಸಮುದಾಯ ಎಸ್.ಟಿ. ಸಮುದಾಯಕ್ಕೆ ಸೇರ್ಪಡೆಯಾದರೇ ನಮಗೆ ತುಂಬಾನೆ ಅನಾನೂಕೂಲವಾಗಲಿದೆ. ಈಗಾಗಳೇ ರಾಜ್ಯದಾದ್ಯಂತ ನಾಯಕ ಸಮುದಾಯ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೆ. ಕೂಡಲೇ ಸರ್ಕಾರ ಈ ಅವೈಜ್ಞಾನಿಕ ನಿರ್ಧಾರದಿಂದ ಹಿಂದೆ ಸರಿಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Valmiki Community – ಸಂವಿಧಾನ ವಿರೋಧಿ ನಿರ್ಧಾರ: ಎನ್.ವಿ. ಗಂಗಾಧರ್
ಬಳಿಕ ತಾಲೂಕು ವಾಲ್ಮೀಕಿ ಸಮುದಾಯ ಅಧ್ಯಕ್ಷ ಎನ್.ವಿ.ಗಂಗಾಧರ್ ಮಾತನಾಡಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಯಾವುದೇ ನಿರ್ಧಾರವು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಅಂತಹ ಕ್ರಮಗಳು ನಿಜವಾದ ಅರ್ಹ ಸಮುದಾಯಗಳಿಗೆ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತರನ್ನಾಗಿಸುತ್ತವೆ. ನಮ್ಮ ಬೇಡ ವಾಲ್ಮೀಕಿ ನಾಯಕ ಸಮುದಾಯವು ಈ ರೀತಿಯ ನಿಯಮಬಾಹಿರ ಸೇರ್ಪಡೆಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಮೀಸಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರಿನಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಉಗ್ರ ಹೊರಾಟ ಹಮ್ಮಿಕೊಂಡಿದ್ದರು. ಇದೀಗ ನಾಯಕ ಸಮುದಾಯದಲ್ಲಿ ಬೇರೆ ಜಾತಿಗಳನ್ನು ಸೇರಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಈ ಸಂಬಂಧ ಸ್ವಾಮೀಜಿಗಳು ಹೋರಾಟಕ್ಕೆ ಕರೆ ಕೊಟ್ಟರೇ ರಾಜ್ಯದಲ್ಲಿ ಹೊಸ ದಂಗೆ ಏಳುತ್ತದೆ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದರು ಒತ್ತಾಯಿಸಿದರು.
Read this also : ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು: ಬಿ.ಅಮೀರ್ ಜಾನ್
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ವಾಲ್ಮೀಕಿ ಸಮುದಾಯದ ಮುಖಂಡರು ಸಲ್ಲಿಸಿದರು. ಈ ಸಮಯದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ಬೀಚಗಾನಹಳ್ಳಿ ನರೇಂದ್ರ, ಚೆಂಡೂರು ರಾಮಾಂಜಿ, ಅಂಜಿನಪ್ಪ, ಹರಿಕೃಷ್ಣ, ಮಹೇಶ್, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

