Vaikuntha Ekadashi – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆ ಬೀದಿಯ ಭೂನಿಳಾ ಸಮೇತ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಬಾಗೇಪಲ್ಲಿಯ ಪ್ರಸಿದ್ದ ಗಡಿದಂ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ವೈಕುಂಠ ಏಕಾದಶಿಯನ್ನು ಆಚರಿಲಾಯಿತು. ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರು ಮುಂಜಾನೆಯಿಂದ ದೇವಾಲಯದ ಮುಂದೆ ಸಾಲುಗಟ್ಟಿ ನಿಂತು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರು.
ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯ ದೇವಾಲಯವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ, ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು. ಮುಖ್ಯವಾಗಿ ಭೂನಿಳಾ ಸಮೇತ ಶ್ರೀ ಲಕ್ಷ್ಮೀ ವೆಂಕಟರಮಣನ್ನು ವಿವಿದ ಹೂವು, ಆಭರಣಗಳಿಂದ ವಜ್ರಾಲಂಕಾರ ವಿಶೇಷವಾಗಿ ಸಿಂಗರಿಸಲಾಗಿತ್ತು. ಪುರೋಹಿತರಾದ ಶರತ್ ಭಾರದ್ವಾಜ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಉತ್ಸವಾದಿ ಧಾರ್ಮಿಕ ಕೈಂಕರ್ಯಗಳು ನಡೆಸಿದರು.ಮಕ್ಕಳಿಂದ ಹಿರಿಯರವರೆಗೆ ನೂರಾರು ಜನರು ಉತ್ತರ ದ್ವಾರದಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಸಾಲುಕಟ್ಟಿದ್ದರು. ತಮ್ಮ ಇಷ್ಟದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರುವಂತೆ ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಿದರು. ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಇನ್ನೂ ಬಾಗೇಪಲ್ಲಿಯ ಗಡಿದಂ ದೇವಾಲಯಕ್ಕೆ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಮಾತನಾಡಿದ ಅವರು, ವೈಕುಂಠ ಏಕಾದಶಿಯ ಪುಣ್ಯ ದಿನದಂದು ನಾಡಿನ ಸಮಸ್ತ ರೈತರು, ಮಹಿಳೆಯರು, ಕಾರ್ಮಿಕರು, ಬಡವರು ಸೇರಿದಂತೆ ಎಲ್ಲರಿ ಇಷ್ಠಾರ್ಥಗಳು ಸಿದ್ದಿಯಾಗಲಿ, ಕಾಲ ಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಆಗಲಿ. ನಾಡಿನಲ್ಲಿ ಸುಖ, ಶಾಂತಿ , ಸಮೃದ್ದಿ, ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಷಯಗಳನ್ನು ಕೋರಿದರು.