E Khata – ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳ ಮಾಲೀಕರು ನೇರವಾಗಿ ಇ-ಖಾತಾ ಮಾಡಿಸಿಕೊಳ್ಳುವ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಇ-ಖಾತಾ ಆಂದೋಲನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನವನ್ನು ಜನರು ಸದ್ಬಳಕೆ ಮಾಡಿಕೊಳ್ಳಿ ಎಂದು ಗುಡಿಬಂಡೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಬಾ ಶಿರೀನ್ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಇ-ಖಾತಾ ಅಭಿಯಾನವನ್ನು ಜಾರಿ ಮಾಡಿದೆ. ಈ ಅಭಿಯಾನವನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಹಲವರಲ್ಲಿ ಈ ಬಿ-ಖಾತೆ ಮಾಡಿಸಿಕೊಂಡರೇ ಅದಕ್ಕೆ ಬೆಲೆಯಿಲ್ಲ ಎಂಬ ಅನುಮಾನ ಇದೆ. ಆದರೆ ಬಿ-ಖಾತಾಗೂ ಬೆಲೆಯಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದರು. ಆದಷ್ಟು ಶೀಘ್ರವಾಗಿ ಜನರು ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಬಿ-ಖಾತಾ ಮಾಡಿಸಿಕೊಳ್ಳಬೇಕು ಎಂದರು.

ಬಳಿಕ ಪ.ಪಂ ಅಧ್ಯಕ್ಷ ವಿಕಾಸ್ ಮಾತನಾಡಿ, ಜನರು ತಮ್ಮ ಸ್ವತ್ತುಗಳಿಗೆ ಖಾತಾ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ ಈ ಅಭಿಯಾನದ ಮೂಲಕ ನೇರವಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದಾಗಿದೆ. ಸರ್ಕಾರ ನೀಡಿರುವ ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ. ಜನರು ನೇರವಾಗಿ ಪುರಸಭೆ ಕಚೇರಿಗೆ ಬಂದು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ನಿಮ್ಮ ಆಸ್ತಿಯ ಇ-ಖಾತೆ ಮಾಡಿಕೊಡಲಾಗುವುದು ಎಂದರು.
ಇದೇ ಸಮಯದಲ್ಲಿ ಪ.ಪಂ ಸದಸ್ಯ ಇಸ್ಮಾಯಿಲ್ ಅಜಾದ್ ಬಾಬು, ನಾಮಿನಿ ಸದಸ್ಯ ಅಂಬರೀಶ್ ಇ-ಖಾತಾ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸಿದರು. ಈ ಸಮಯದಲ್ಲಿ ಪಪಂ ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಬಷೀರ್, ಪಪಂ ಸಿಬ್ಬಂದಿಯಾದ ಬಾಲಪ್ಪ ಸೇರಿದಂತೆ ಹಲವರು ಇದ್ದರು.