ಗುಡಿಬಂಡೆ: ಬೇಸಿಗೆ ರಜೆ ಮುಗಿದು ಮೇ.31 ರಿಂದ ಶಾಲಾ ತರಗತಿಗಳು ಆರಂಭವಾಗಿದ್ದು, ಸುಮಾರು ದಿನಗಳ ಬಳಿಕ ಶಾಲೆಗೆ ಬರುತ್ತಿರುವ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಆತ್ಮೀಯವಾಗಿ ಆಹ್ವಾನಿಸಲಾಯಿತು. ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಗುಲಾಬಿ ಕೊಟ್ಟು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡರು.
ಈ ವೇಳೆ ಶಿಕ್ಷಣ ಇಲಾಖೆಯ ಟಿಪಿಒ ಮುರಳಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಮೇ.31 ರಿಂದ ಶಾಲಾ ತರಗತಿಗಳು ಆರಂಭವಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂದಂತಹ ಪಠ್ಯಪುಸ್ತಕಗಳನ್ನು ಸಹ ಒದಗಿಸಲಾಗಿದೆ. ವಿದ್ಯಾರ್ಥಿಗಳು ಸಹ ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಶಾಲೆಯ ಆರಂಭದಿಂದಲೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಬೇಕು. ಮೊಬೈಲ್, ಟಿವಿಗಳನ್ನು ಕಡಿಮೆ ಮಾಡಬೇಕು. ಓದು, ಕ್ರೀಡೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಉತ್ತಮ ಫಲಿತಾಂಶ ಪಡೆದು ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಳಿಕ ಶಾಲೆಯ ಮುಖ್ಯ ಶಿಕ್ಷಕ ನಂಜುಂಡ ಮಾತನಾಡಿ, ಸರ್ಕಾರಿ ಶಾಲೆಯೆಂದ ಮಾತ್ರ ಕೀಳು ಭಾವನೆಯಿಂದ ನೋಡುವುದು ಸರಿಯಲ್ಲ. ಸರ್ಕಾರಿ ಶಾಲೆಯಲ್ಲಿ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲದಂತ ಶಿಕ್ಷಣ ದೊರೆಯುತ್ತದೆ. ಜೊತೆಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳು ಸಿಗುತ್ತವೆ. ಎಲ್ಲವನ್ನೂ ಬಳಸಿಕೊಂಡು ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ಮಾಡಬೇಕು. ಪೋಷಕರು ಸರ್ಕಾರಿ ಶಾಲೆಯ ಬಗ್ಗೆ ಇರುವಂತಹ ಕೀಳು ಮನೋಭಾವವನ್ನು ತೊಡೆದು ಹಾಕಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಈ ಸಮಯದಲ್ಲಿ ಸುಮಾರು ದಿನಗಳ ಬಳಿಕ ತಮ್ಮ ಸ್ನೇಹಿತರನ್ನು ಭೇಟಿಯಾದ ವಿದ್ಯಾರ್ಥಿಗಳು ಖುಷಿಯಿಂದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತಹ ದೃಶ್ಯಗಳು ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ಶಿಕ್ಷಕರಾದ ಶ್ರೀನಿವಾಸ್, ಅಲ್ಲಬಕಾಷ್, ಸಿ.ಎಲ್.ವೆಂಕಟೇಶ್ ಮೂರ್ತಿ, ಸರೋಜಿನಿ, ನಿರ್ಮಲ, ಮಹಾಲಕ್ಷ್ಮೀ, ಅರುಣ, ಮೇಘನ, ರೋಜಾ, ಸೇರಿದಂತೆ ಹಲವರು ಇದ್ದರು.