Tamilnadu – ಶಿಕ್ಷಕರನ್ನು ದೇವರಂತೆ ಕಾಣಲಾಗುತ್ತದೆ, ಅದರಿಂದಲೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂದು ಹೇಳಲಾಗುತ್ತದೆ. ಆದರೆ ಅದೇ ಶಿಕ್ಷಕ ಇಲ್ಲಿ ಕೀಚಕನಾಗಿದ್ದಾನೆ. ತಮಿಳುನಾಡಿನ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ ಮೂರು ಮಂದಿ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನಕೃತ್ಯ ನಡೆದಿದೆ. ಈ ಸಂಬಂಧ ಮೂರು ಮಂದಿ ಕಾಮುಕ ಶಿಕ್ಷಕರನ್ನು ಬಂಧಿಸಲಾಗಿದ್ದು, ಮೂವರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಕೃಷ್ಣಗಿರಿಯ ಪ್ರೌಢಶಾಲೆಯೊಂದರಲ್ಲಿ ನಡೆದಿದ್ದು, ಆರೋಪಿಗಳನ್ನು ಚಿನ್ನಸ್ವಾಮಿ, ಆರುಮುಗಂ ಹಾಗೂ ಪ್ರಕಾಶ್ ಎಂದು ಗುರ್ತಿಸಲಾಗಿದೆ. ಬಾಲಕಿ ಒಂದು ತಿಂಗಳಿನಿಂದ ಶಾಲೆಗೆ ಗೈರಾದ ಹಿನ್ನಲೆ, ಶಾಲೆಯ ಪ್ರಾಂಶುಪಾಲರು ಸಂತ್ರಸ್ತ ಬಾಲಕಿಯ ಮನೆಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಆ ವೇಳೆ ಮಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಬಾಲಕಿಯ ತಾಯಿ ಹೇಳಿದ್ದಾರೆ. ವಿಷಯ ತಿಳಿದ ಮುಖ್ಯಶಿಕ್ಷಕಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕಾಮುಕ ಮೂವರು ಶಿಕ್ಷಕರನ್ನ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಅಪ್ರಾಪ್ತೆಯ ಮೇಲೆ ಮೊದಲು ಓರ್ವ ಶಿಕ್ಷಕ ಅತ್ಯಾಚಾರವೆಸಗಿದ್ದಾನೆ. ನಂತರ ಈ ವಿಷಯ ತಿಳಿದ ಇನ್ನಿಬ್ಬರು ಶಿಕ್ಷಕರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ಮೂವರನ್ನು ಬಂಧನ ಮಾಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ ಸಂತ್ರಸ್ತೆಯನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಕೃಷ್ಣಗಿರಿ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಮೂರು ಮಂದಿ ಕಾಮುಕ ಶಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇತ್ತ ಈ ಘಟನೆಯ ಕುರಿತು ಸಾರ್ವಜನಿಕರೂ ಸಹ ಆಕ್ರೋಷ ಹೊರಹಾಕಿ ಕಾಮುಕ ಶಿಕ್ಷಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.