Students – ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶಿಸ್ತಿನಿಂದ ಓದುವುದನ್ನು ರೂಡಿಸಿಕೊಳ್ಳಬೇಕು ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಟ್ಟು ಅವರನ್ನು ಓದಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಸೋಮೇನಹಳ್ಳಿ ಹೋಬಳಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100ರ ಸಾಧನೆಗಾಗಿ ಸ್ಪೂರ್ತಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ ಶಿಕ್ಷಣ ಅತ್ಯಂತ ಪ್ರಮುಖವಾದುದು. ಶಿಕ್ಷಣದಿಂದ ಏನಾದರೂ ಸಾಧಿಸಬಹುದು. ನಾವು ಸಹ ಬಡಕುಟುಂಬದಿಂದ ಬಂದಂತಹವರು. ನಮ್ಮ ತಂದೆ-ತಾಯಿ ತುಂಬಾನೆ ಕಷ್ಟಪಟ್ಟು ಓದಿಸಿದ ಫಲವಾಗಿ ಅವರು ಈಗ ಸಂತೋಷದಿಂದ ಇದ್ದಾರೆ. ಇದೀಗ ಸರ್ಕಾರ ಶಿಕ್ಷಣಕ್ಕಾಗಿ ತುಂಬಾನೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನೀವು ಸಹ ಶಿಸ್ತಿನಿಂದ ಓದಬೇಕು. ಕೇವಲ ಓದುವುದು ಮಾತ್ರವಲ್ಲ ಶಿಸ್ತನ್ನು ಮೈಗೂಡಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮೊಬೈಲ್, ಟಿವಿಗಳಿಗೆ ಮಕ್ಕಳು ದಾಸರಾಗದೇ ಓದಬೇಕು. ಪ್ರಧಾನಿ ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು ಅಂತಹವರು ಇದೀಗ ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ, ತಾವುಗಳೂ ಸಹ ಇದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದರು.
ಇನ್ನೂ ಪೋಷಕರೂ ಸಹ ತಮ್ಮ ಮಕ್ಕಳಿಗೆ ಪ್ರೀತಿಯಿಂದ ಓದಿಸುವ ಕೆಲಸ ಮಾಡಬೇಕು. ಇನ್ನೇನು 50 ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರಲಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಓದುವಂತೆ ಮಾಡಬೇಕು. ಪೋಷಕರು ಸಹ ತಮ್ಮ ಮಕ್ಕಳು ಓದುವಾಗ ಟಿ.ವಿ. ಸೀರಿಯಲ್ ನೋಡುವುದು ಅಥವಾ ಮೊಬೈಲ್ ಗಳನ್ನು ಬಳಸುವುದನ್ನು ಬಿಡಬೇಕು. ಜೊತೆಗೆ ಅವರಿಗೂ ಸಹ ಮೊಬೈಲ್ ಗಳನ್ನು ನೀಡಬಾರದು. ನಿಮ್ಮ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸ್ ಆದರೇ ನನ್ನ ಮಕ್ಕಳು ಪಾಸ್ ಆದಂತೆ ಖುಷಿಪಡುತ್ತೇನೆ. ಶಿಕ್ಷಕರೂ ಸಹ ತಮ್ಮ ತಮ್ಮ ಶಾಲೆಗಳ ವಿದ್ಯಾರ್ಥಿಗಳು ತಪ್ಪದೇ ಪಾಸ್ ಆಗಲು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಲ್ಲವನ್ನೂ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಇದೇ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕೇವಲ 50 ದಿನಗಳು ಬಾಕಿಯಿದೆ. ಆದ್ದರಿಂದ ಮಕ್ಕಳು ಕಠಿಣ ಪರಿಶ್ರಮದಿಂದ ಓದಬೇಕು. ಶಾಸಕರು ಸಹ ಈ ಬಾರಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೆಲ್ಲಾ ಪಾಸ್ ಆಗಬೇಕು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಲೂಕಿನ ಪ್ರೌಢಶಾಲೆಗಳನ್ನು ದತ್ತು ನೀಡಲಾಗಿದೆ. ಅಧಿಕಾರಿಗಳೂ ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಓದುವಂತೆ ಪ್ರೇರಣೆ ನೀಡುತ್ತಿದ್ದಾರೆ. ಶಾಸಕರು ಎಲ್ಲಾ ಪ್ರೌಢಶಾಲೆಗಳಿಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ರೂಪಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಬೇಕು ಎಂದರು.
ಈ ವೇಳೆ ಶಿಕ್ಷಣ ಇಲಾಖೆಯ ಡಿಡಿಪಿಐ ಮುನಿಕೆಂಪೇಗೌಡ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ. ಇ.ಒ ನಾಗಮಣಿ, ಪ.ಪಂ ಅಧ್ಯಕ್ಷ ವಿಕಾಸ್, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಬಿ.ಆರ್.ಸಿ ಸಂಯೋಜಕಿ ಗಂಗರತ್ನಮ್ಮ, ಇಸಿಒ ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.