ಅನಾದಿ ಕಾಲದಿಂದಲೂ ಆಸ್ತಿಗಾಗಿ ಅಪ್ಪ-ಮಕ್ಕಳು, ದಾಯದಿಗಳ ನಡುವೆ ಜಗಳಗಳು, ಹಲ್ಲೆಗಳು, ಕೊಲೆಗಳು ನಡೆದಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಆಸ್ತಿ, ವರದಕ್ಷಿಣಿಗಾಗಿ ಗಂಡ ಹೆಂಡತಿಗೆ ಚಿತ್ರಹಿಂಸೆ ನೀಡಿದ ಸುದ್ದಿಗಳನ್ನೂ ಸಹ ಕೇಳಿರುತ್ತೇವೆ. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಗಂಡ ಹೆಂಡತಿಗೆ ಶಿಕ್ಷೆ ಕೊಡುವ ಬದಲಿಗೆ ಹೆಂಡತಿಯೇ ಗಂಡನಿಗೆ ನಾನಾ ರೀತಿಯಲ್ಲಿ ಶಿಕ್ಷೆ ಕೊಟ್ಟಿದ್ದಾರೆ. ಆಸ್ತಿಗಾಗಿ ಗಂಡನನ್ನು ಸರಪಳಿಯಿಂದ ಕಟ್ಟಿಹಾಕಿ ಹಿಂಸೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇತ್ತೀಚಿಗೆ ಹೆಂಡತಿ ಗಂಡನಿಗೆ ಶಿಕ್ಷೆ ನೀಡುವಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಘಟನೆ ನಡೆದಿದೆ. ತೆಲಂಗಾಣದ ಯಾದಾದ್ರಿ ಜಿಲ್ಲೆಯ ಗಟಕೇಸರ್ ವ್ಯಾಪ್ತಿಯ ಮಹಿಳೆಯೊಬ್ಬರು ಆಸ್ತಿಗಾಗಿ ತನ್ನ ಪತಿಯನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದಾಳೆ. ಯಾದಾದ್ರಿ ವ್ಯಾಪ್ತಿಯ ಘಟಕೇಸರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರತಮ್ಮ (45) ಎಂಬಾಕೆ ತನ್ನ ಪತಿ ನರಸಿಂಹ (50) ಎಂಬುವವರಿಗೆ ಆಸ್ತಿಗಾಗಿ ಚಿತ್ರಹಿಂಸೆ ನೀಡಿದ್ದಾಳೆ. ಇಬ್ಬರ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ನರಸಿಂಹ ನನ್ನು ಮೂರು ದಿನಗಳಿಂದ ಕಟ್ಟಿಹಾಕಿ ಥಳಿಸಿದ್ದಾರೆ ಎನ್ನಲಾಗಿದೆ. ಈ ದಂಪತಿಗೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರಿದ್ದಾರೆ. ನರಸಿಂಹನ ಹೆಸರಿನಲ್ಲಿದ್ದ ಜಮೀನು ಮಾರಟಕ್ಕೆ ಸಂಬಂಧಿಸಿದಂತೆ ಮಕ್ಕಳು ತಂದೆಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದರಂತೆ. ನರಸಿಂಹ ತನ್ನ ಪತ್ನಿಯ ಜಮೀನಿನಲ್ಲಿ ಮನೆ ಕಟ್ಟಿದ್ದು, ಮನೆ ಕಟ್ಟಲು ಮಾಡಿದ ಸಾಲವನ್ನು ತೀರಿಸಲು ತನ್ನ ಹೆಸರಿಗೆ ಜಮೀನು ಮಾರಾಟ ಮಾಡಲು ಮುಂದಾಗಿದ್ದನಂತೆ. ಇದರಿಂದ ಕೋಪಗೊಂಡ ಪತ್ನಿ, ಮಕ್ಕಳು ನರಸಿಂಹ ರವರ ಜೊತೆಗೆ ಜಗಳವಾಡಿದ್ದಾರೆ.

ಈ ಕಾರಣದಿಂದ ಬೇಸತ್ತ ನರಸಿಂಹ ಮನೆ ಬಿಟ್ಟು ಹೋಗಿದ್ದಾರೆ. ನಂತರ ನರಸಿಂಹ ನಾಪತ್ತೆಆಗಿರುವುದು ತಿಳಿದು ಹುಡುಕಲು ಶುರು ಮಾಡಿದ್ದಾರೆ. ಭುವನಗಿರಿ ಜಿಲ್ಲೆಯಲ್ಲಿ ನರಸಿಂಹ ಇರುವುದನ್ನು ತಿಳಿದ ಪತ್ನಿ ಭಾರತಮ್ಮ ಮಕ್ಕಳೊಂದಿಗೆ ಅವರನ್ನು ಭೇಟಿಯಾಗಿ ಮನೆಗೆ ಕರೆತಂದಿದ್ದರು. ಬಳಿಕ ಆತ ಎಲ್ಲಿಗೂ ಹೋಗಬಾರದೆಂದು ನರಸಿಂಹನನ್ನು ಕಬ್ಬಿಣ ಸರಪಳಿಯಿಂದ ಕಟ್ಟಿಹಾಕಿ ಕೋಣೆಗೆ ಬೀಗ ಹಾಕಿ, ಮೂರು ದಿನಗಳ ಕಾಲ ಹಿಗ್ಗಾಮುಗ್ಗಾ ಥಳಿಸಿದ್ದಾಳೆ ಎನ್ನಲಾಗಿದೆ. ಸ್ಥಳೀಯರು ಗುಟ್ಟಾಗಿ ಈ ಘಟನೆಯನ್ನು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿ ಪತ್ನಿ ಹಾಗೂ ಮಕ್ಕಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
