ರಾಜ್ಯ ಸರ್ಕಾರ 7ನೇ ವೇತನ ಆಯೋಗದ (7th Pay) ಶಿಪಾರಸ್ಸುಗಳ ಅನುಷ್ಠಾನ ಮಾಡಿದ್ದು, ಅದರಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ (Retired Employees) ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ಡಾ.ನಾರಾಯಣಸ್ವಾಮಿ 7ನೇ ವೇತನ ಆಯೋಗದ ವರದಿ 2022ರ ಜುಲೈಗೆ ಪೂರ್ವಾನ್ವಯವಾಗುವಂತೆ ಅಂಗೀಕರಿಸಬೇಕಿತ್ತು. ಆದರೆ ಸರ್ಕಾರ ಈ ಶಿಫಾರಸನ್ನು ಪರಿಗಣಿಸಿಲ್ಲ. 2022ರ ಜುಲೈನಿಂದ 2024ರ ಜುಲೈವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಈ ಸೌಲಭ್ಯ ಅನ್ವಯವಾಗಿಲ್ಲ. ಈ ಅವಧಿಯಲ್ಲಿ ನಿವೃತ್ತಿ ಹೊಂದಿದ 30 ಸಾವಿರ ನೌಕರರಿಗೆ ಅನ್ಯಾಯವಾಗಿದೆ. ಈ 25 ತಿಂಗಳ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಪರಿಷ್ಕೃತ ವೇತನದ ಅನ್ವಯ ಸರಿಯಾಗಿ ಲೆಕ್ಕಚಾರ ಮಾಡದೇ ಹಳೆಯ ವೇತನ ಪರಿಗಣಿಸುತ್ತಿರುವುದು ನಮಗೆ ತುಂಬಾನೆ ಬೇಸರವಾಗಿದೆ. 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದು ನಮಗೂ ಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಬಳಿಕ ನಿವೃತ್ತ ನೌಕರರ ವೇದಿಕೆಯ ತಾಲೂಕು ಅಧ್ಯಕ್ಷ ಅಶ್ವತ್ಥಪ್ಪ ಮಾತನಾಡಿ, ಕಳೆದ 30ರಿಂದ 40 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿರುವ ಸಾವಿರಾರು ಮಂದಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಆರ್ಥಿಕ ಸೌಲಭ್ಯ ಕೊಡದೇ ಅನ್ಯಾಯ ಮಾಡಿದೆ. ನಾವು 7ನೇ ವೇತನ ಆಯೋಗ ಜಾರಿಯಾಗಿರುವ ಸಂದರ್ಭದಲ್ಲಿ ನಿವೃತ್ತಿಯಾಗಿದ್ದೇವೆ. ಆದರೆ, ನಮಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಆರ್ಥಿಕ ಸೌಲಭ್ಯ ನೀಡಿರುತ್ತಿರುವ ಸರ್ಕಾರದ ಕ್ರಮ ಅತ್ಯಂತ ಅವೈಜ್ಞಾನಿಕವಾಗಿದೆ. ಆದ್ದರಿಂದ ನಮಗೆ 7ನೇ ಆಯೋಗ ಪರಿಷ್ಕರಿಸುವಂತೆ ಮೂಲ ವೇತನಕ್ಕೆ ಒಳಪಡಿಸಿ ನಿವೃತ್ತಿಯ ಬಳಿಕ ಬರುವ ಸೌಲಭ್ಯಗಳನ್ನು ನೀಡಬೇಕು ಎಂದರು.
ಈ ವೇಳೆ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳಾದ ವೈ.ಎ.ನಾಗಭೂಷಣಾಚಾರಿ, ಜಯಪ್ರಕಾಶ್, ಮಂಜುನಾಥ್, ಕೆ.ಆರ್.ಅಶ್ವತ್ಥಪ್ಪ, ಬಾಲಪ್ಪರೆಡ್ಡಿ, ಆದಿನಾರಾಯಣ, ಶ್ರೀನಿವಾಸ, ಮುರಳಿಕೃಷ್ಣ ಸೇರಿದಂತೆ ಹಲವರು ಇದ್ದರು.