R Ashoka – ಕರ್ನಾಟಕ ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ಸಿಎಂ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದರಂತೆ ಮುಂದಿನ ನವೆಂಬರ್ ಮಾಹೆಯ 15, 16 ಕ್ಕೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಸಾಥ್ ನೀಡಿದ ಆರ್. ಅಶೋಕ್ ಕಳೆದ ಐದು ದಿನಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆರ್.ಅಶೋಕ್ ಹಾಗೂ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಅಂಗನವಾಡಿ ನೌಕರರ ಬೆಂಬಲಕ್ಕೆ ನಿಂತರು. ಕಳೆದೆರಡು ದಿನಗಳ ಹಿಂದೆಯಷ್ಟೆ ಪೊಲೀಸರು ಟೆಂಟ್ ಕಿತ್ತು ಹಾಕಲು ನೋಡಿದ್ದನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರು ಆಕ್ರೋಷ ಹೊರಹಾಕಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೇಸ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಮಾಡಿದೆ. 5ನೇ ಗ್ಯಾರಂಟಿ ಕೊಡ್ತೀವಿ ಅಂತಾ ಭರವಸೆ ಕೊಟ್ಟು ಮೋಸ ಮಾಡಿದೆ. ಬೇಡಿಕೆ ಈಡೇರುವ ತನಕ ಪಕ್ಷ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದು ಹೇಳಿದರು. ಇನ್ನೂ ಬೊಮ್ಮಾಯಿ ಇದ್ದಾಗ ಸೇವಾ ಹಿರಿತನ ಹೆಚ್ಚಳ ಮಾಡಿದ್ರು. ಪೊಲೀಸರು ಟೆಂಟ್ ಕಿತ್ತು ಹಾಕಲು ಬಂದಿದ್ರು. ಇಲ್ಲಿ ಟೆಂಟ್ ಕಿತ್ರೆ ಸರ್ಕಾರದ ಟೆಂಟ್ ಕಿತ್ತು ಹಾಕ್ತಾರೆ ನೆನಪಿರಲಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಕೌಂಟರ್ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್‌ನವರೇ ಪ್ರಣಾಳಿಕೆಯಲ್ಲಿ ಸಂಬಳ ಹೆಚ್ಚು ಮಾಡ್ತೀವಿ ಅಂತ ಹೇಳಿದ್ದರು. ಹೇಳಿ ಎರಡು ವರ್ಷ ಆಗಿದೆ ಆದ್ರೆ ಸಂಬಳ ಮಾತ್ರ ಇನ್ನೂ ಹೆಚ್ಚಾಗಿಲ್ಲ. ಇನ್ನು ಸದನದಲ್ಲಿ 85 ಭರವಸೆ ಈಡೇರಿಸಿದ್ದೇವೆ ಅಂತ ಹೇಳ್ತಾರೆ. ಅಲ್ಲದೇ ಸರ್ಕಾರಿ ಹುದ್ದೆಗಳೂ ಭರ್ತಿ ಆಗಿದೆ ಅಂತ ಹೇಳ್ತಾರೆ. ಆದರೆ ಏನೂ ಭರ್ತಿ ಆಗಿಲ್ಲ ಅವರ ಜೇಬು ಮಾತ್ರ ಭರ್ತಿ ಆಗ್ತಿದೆ ಎಂದು ಆಕ್ರೋಷ ಹೊರಹಾಕಿದರು.