ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಸುವಲ್ಲಿ ಗ್ರಾ.ಪಂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಾಗೇಪಲ್ಲಿ ತಾಲೂಕಿನ ಘಂಟಂವಾರಪಲ್ಲಿ ಗ್ರಾ.ಪಂ ವ್ಯಾಪ್ತಿಯ ಪಾತಬಾಗೇಪಲ್ಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಕೊಡೆಗಳನ್ನು ಹಿಡಿದು ಘಂಟಂವಾರಪಲ್ಲಿ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪಾತಬಾಗೇಪಲ್ಲಿ ಗ್ರಾಮಸ್ಥರು ಮಾತನಾಡಿ, ಕಳೆದ 20 ದಿನಗಳಿಂದ ಗ್ರಾ.ಪಂವತಿಯಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಇದರಿಂದ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಅನೇಕ ಸಲ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೆ ಗ್ರಾ.ಪಂ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ನಮ್ಮ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಗ್ರಾ.ಪಂ ಅಧಿಕಾರಿಗಳು ಸ್ಪಂಧಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಗ್ರಾ.ಪಂ ಕಚೇರಿ ಮುಂದೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಗ್ರಾಮಸ್ಥರು ಹಾಗೂ ಮಹಿಳೆಯರು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಗೆ ಹಸಿರು ಸೇನೆ ತಾಲೂಕು ಘಟಕ ಸಾಥ್ ನೀಡಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮತ್ತು ಘಂಟಂವಾರಪಲ್ಲಿ ಗ್ರಾ.ಪಂ ಅಧಿಕಾರಿಗಳು ಬೇಟಿ ನೀಡಿ ಒಂದು ವಾರದಲ್ಲಿ ಪಾತಬಾಗೇಪಲ್ಲಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಘಂಟಂವಾರಪಲ್ಲಿ ಗ್ರಾ.ಪಂ ವ್ಯಾಪ್ತಿಯ ಪಾತಬಾಗೇಪಲ್ಲಿಯ ಲಕ್ಷ್ಮೀ, ಗಂಗಮ್ಮ, ಲಕ್ಷ್ಮೀನರಸಮ್ಮ, ಗ್ರಾಮದ ಸದಸ್ಯರು, ಹಸಿರು ಸೇನೆ ತಾಲೂಕು ಅಧ್ಯಕ್ಷ ಗೋವಿಂದರೆಡ್ಡಿ ಸೇರಿದಂತೆ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳೆಯರು ಇದ್ದರು