Pramod Muthalik – ಕೆಲವು ದಿನಗಳ ಹಿಂದೆಯಷ್ಟೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಕಳುಹಿಸಿದ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಾವುದೇ ಭೇದ-ಭಾವ ಇಲ್ಲದೇ ಶಿಕ್ಷಣ, ಉಚಿತ ಊಟ, ಉಚಿತ ವಸತಿ ನೀಡುತ್ತಿರುವ ಸಿದ್ದಗಂಗಾ ಮಠಕ್ಕೆ ಸರ್ಕಾರ ಬಿಲ್ ಕಳುಹಿಸಿತ್ತು. ಈ ಕುರಿತು ಶ್ರೀರಾಮಸೇನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಷ ಹೊರಹಾಕಿದ್ದಾರೆ. ಮಠಕ್ಕೆ ಬಿಲ್ ಕಳುಹಿಸುವ ನೀವು ಎಷ್ಟು ಮಸೀದಿ, ಚರ್ಚ್‌ಗಳಿಗೆ ಈ ರೀತಿಯ ನೊಟೀಸ್ ಕೊಟ್ಟಿದ್ದೀರಿ ಎಂದು ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ರವರು, ಸರ್ಕಾರಗಳು ಮಾಡದಷ್ಟು ಸೇವೆಯನ್ನು ಸಿದ್ದಗಂಗಾ ಮಠ ಮಾಡುತ್ತಿದೆ. ಶಿಕ್ಷಣ, ವಸತಿ ಮೊದಲಾದ ಸೇವೆಯನ್ನು 30-40 ವರ್ಷಗಳಿಂದ ಸಿದ್ದಗಂಗಾ ಮಠ ಮಾಡುತ್ತಿದೆ. ಲಕ್ಷಾಂತರ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಊಟ ಒದಗಿಸುತ್ತಿದೆ. ಅಂತಹ ಮಠಕ್ಕೆ ಬಿಲ್ ಕಟ್ಟುವಂತೆ ನೊಟೀಸ್ ಕಳುಹಿಸುತ್ತೀರಾ ಎಂದರೇ ನಿಮ್ಮ ಯಾವ ರೀತಿಯ ಮನಸ್ಥಿತಿ ಎಂದು ಆಕ್ರೋಷ ಹೊರಹಾಕಿದರು. ಈ ಸರ್ಕಾರ ಮಠಗಳಿಗೆ ನೊಟೀಸ್ ಕಳುಹಿಸುವ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ಮಠಗಳಿಗೆ ಹೇಗೆ ನೊಟೀಸ್ ಕಳುಹಿಸುತ್ತೀರೋ ಅದೇ ರೀತಿ ಮಸೀದಿಗಳಿಗೂ ಕಳುಹಿಸಬೇಕಲ್ಲವೇ. ರಾಜ್ಯದಲ್ಲಿ ಈ ರೀತಿಯಲ್ಲಿ ಎಷ್ಟು ನೊಟೀಸ್ ಕಳುಹಿಸಿದ್ದೀರಾ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೂ ವಕ್ಫ್ ಬೋರ್ಡ್ ಕುರಿತು ಸಹ ಮಾತನಾಡಿದ್ದಾರೆ. ಸರ್ಕಾರ ಮುಸ್ಲೀಂ ಓಲೈಕೆಗಾಗಿ ವಕ್ಫ್ ಬೋರ್ಡ್ ಸ್ಥಾಪಿಸಿದೆ. ಪಾರ್ಸಿಗಳು, ಕ್ರಿಶ್ಚಿಯನ್ ಗಳೂ ಸೇರಿದಂತೆ ಆರು ಅಲ್ಪಸಂಖ್ಯಾತ ಪಂಗಡಗಳು ಮೀಸಲಾತಿಯಡಿಯಿದ್ದರೂ ಈ ವರೆಗೆ ಮುಸ್ಲೀಂರನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆಯೇ ವಿನಃ ಬೇರೆ ಸಮುದಾಯದವರನ್ನು ಮಾಡಿಲ್ಲ. ಬಿಜೆಪಿಯವರೂ ಸಹ ಬೇರೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲ. ಈ ಕಾರಣದಿಂದಲೇ ಹಿಂದೂ ವಿರೋಧಿ ಸಚಿವ ಜಮೀರ್ ಅಹಮ್ಮದ್ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂದುವರೆದು ಹೊಸ ವರ್ಷದ ಸಂಭ್ರಮಾಚರಣೆಯ ಕುರಿತು ಸಹ ಮಾತನಾಡಿದ್ದಾರೆ. ಡಿ.30 ಹಾಗೂ ಡಿ.31 ರಾಜ್ಯದಾದ್ಯಂತ ಬಾರ್ ಗಳನ್ನು ಮುಚ್ಚಬೇಕು. ಹೊಸ ವರ್ಷದ ಆಚರಣೆಯನ್ನು ಶ್ರೀರಾಮಸೇನೆ ಹಿಂದೆಯಿಂದಲೂ ವಿರೋಧಿಸುತ್ತಾ ಬಂದಿದೆ. ಹಿಂದೂ ಸಂಸ್ಕೃತಿಯ ಪ್ರಕಾರ ನಮಗೆ ಯುಗಾದಿಯೇ ಹೊಸ ವರ್ಷ. ಬ್ರೀಟಿಷರು ಹಾಗೂ ಕ್ರಿಶ್ಚಿಯನ್ ಪರಂಪರೆ ಜನವರಿ 1 ಹೊಸ ವರ್ಷ. ಇದು ಅವೈಜ್ಞಾನಿಕವಾದುದು ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.