Annual Day – ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತದೆ, ಜೊತೆಗೆ ಶಿಕ್ಷಣಕ್ಕಾಗಿ ಸರ್ಕಾರಗಳೂ ಸಹ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಉತ್ತನ ಸ್ಥಾನ ಅಲಂಕರಿಸಬೇಕೆಂದು ಶಿಕ್ಷಣ ಇಲಾಖೆಯ ಚಿಕ್ಕಬಳ್ಳಾಪುರ ಡಿಡಿಪಿಐ ಮುನಿಕೆಂಪೇಗೌಡ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಚಿಣ್ಣರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಓದುವಂತಹ ಸಮಯದಲ್ಲಿ ಶಿಕ್ಷಣ ಪಡೆಯುವುದು ತುಂಬಾನೆ ಕಷ್ಟಕರವಾಗಿತ್ತು. ಪಠ್ಯ-ಪುಸ್ತಕ ಖರೀದಿಸಲು ಸಹ ಆಗುತ್ತಿರಲಿಲ್ಲ. ಆದರೂ ಸಹ ಕಷ್ಟಪಟ್ಟು ಓದುತ್ತಿದ್ದೆವು. ಆದರೆ ಇಂದಿನ ದಿನಗಳಲ್ಲಿ ಉಚಿತವಾಗಿ ಶಿಕ್ಷಣ ಸೇರಿದಂತೆ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳು ದೊರೆಯುತ್ತಿದೆ. ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸಾಧನೆ ಮಾಡಬೇಕು. ಇನ್ನೂ ಇಂದಿನ ಕಾಲದಲ್ಲಿ ಕಂಪ್ಯೂಟರ್ ಜ್ಞಾನ ತುಂಬಾನೆ ಪ್ರಾಮುಖ್ಯತೆ ವಹಿಸುತ್ತದೆ. ಕಂಪ್ಯೂಟರ್ ಜ್ಞಾನ ಇಲ್ಲದೇ ಇದ್ದರೇ ಅವಿದ್ಯಾವಂತ ಎಂದೇ ಕರೆಯಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣವನ್ನೂ ಸಹ ಪಡೆದುಕೊಳ್ಳಬೇಕು ಎಂದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಈ ಹಿಂದೆ ದುಡ್ಡೆ ದೊಡ್ಡಪ್ಪ ಎಂಬ ಮಾತಿತ್ತು. ಆದರೆ ಇದೀಗ ಅದು ತಪ್ಪಾಗಿದೆ. ವಿದ್ಯೆ ಇದ್ದವನೇ ದೊಡ್ಡಪ್ಪ ಎನ್ನಲಾಗುತ್ತಿದೆ. ಸರ್ಕಾರಗಳು ಮಕ್ಕಳಿಗೆ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅನೇಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಜೊತೆಗೆ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿಗಳು ಶಿಕ್ಷಣಕ್ಕಾಗಿ ವ್ಯಯ ಮಾಡಬೇಕು. ಆದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ಉನ್ನತ ವಿದ್ಯಾಭ್ಯಾಸ ಪಡೆದುಕೊಂಡ ಶಿಕ್ಷಕರೇ ಇರುತ್ತಾರೆ. ಆದ್ದರಿಂದ ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಿ. ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಅನೇಕರು ಇಂದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಸಾವಿರ ವಿದ್ಯಾರ್ಥಿ ವೇತನ ಸಹ ಸಿಗಲಿದೆ. ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇನ್ನೂ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿದ್ದು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಮಂಗಳಮ್ಮ ಅಶ್ವತ್ಥಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಬಿ.ಆರ್.ಪಿ.ಕೆ.ವಿ.ಮಂಜುನಾಥ್, ಸಿ.ಆರ್.ಪಿಗಾಳದ ರಾಜೇಶ್, ಷರೀಫ್, ಮುಖಂಡ ಕೃಷ್ಣೇಗೌಡ, ಅಶ್ವತ್ಥಪ್ಪ, ಶಾಲೆಯ ಮುಖ್ಯಶಿಕ್ಷಕ ನಾಗಲಿಂಗಪ್ಪ, ಸಹ ಶಿಕ್ಷಕರಾದ ರಾಜಶೇಖರ್, ರಾಘವೇಂದ್ರ, ಶ್ರೀನಿವಾಸ್, ಮನೋಹರ್, ರಶ್ಮಿ, ಲೀಲಾವತಿ, ಮಂಜುಳ, ಲಕ್ಷ್ಮೀ ಕೃಪ, ಜ್ಯೋತಿ ಸೇರಿದಂತೆ ಹಲವರು ಇದ್ದರು.