Nurse – ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ಬಾಲಕ ಆಸ್ಪತ್ರೆಗೆ ಬಂದಿದ್ದು, ಆತನ ಗಾಯಕ್ಕೆ ಹೊಲಿಗೆ ಹಾಕುವ ಬದಲಿಗೆ ನರ್ಸ್ ಫೆವಿಕ್ವಿಕ್ ಹಾಕಿದ ಘಟನೆ ನಡೆದಿದೆ. ಕಳೆದ 2023 ರಲ್ಲಿ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾ ಎಂಬಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದೀಗ ಕರ್ನಾಟಕದಲ್ಲಿ ಅಂತಹುದೇ ಘಟನೆ ನಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ 7 ವರ್ಷದ ಬಾಲಕ ಆಟವಾಡುವಾಗ ಕೆನ್ನೆಯ ಭಾಗಕ್ಕೆ ಬಲವಾದ ಗಾಯ ಮಾಡಿಕೊಂಡಿದ್ದು, ಅದಕ್ಕೆ ಹೊಲಿಗೆ ಹಾಕಬೇಕಿತ್ತು. ಆದರೆ ಆಡೂರು ಸರ್ಕಾರಿ ಆಸ್ಪತ್ರೆ ನರ್ಸ್ ಜ್ಯೋತಿ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ್ದಾರೆ. ಅಂದಹಾಗೆ ಈ ಘಟನೆ ಕಳೆದ ಜನವರಿ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುರುಕಿಶನ್ ಎಂಬ ಬಾಲಕ ಆಟ ಆಡುವಾಗ ಕೆನ್ನಗೆ ಗಾಯ ಮಾಡಿಕೊಂಡಿದ್ದಾನೆ. ಬಲವಾದ ಗಾಯವಾದ ಕಾರಣ ರಕ್ತ ಸುರಿಯುತ್ತಿತ್ತು. ಕೂಡಲೇ ಬಾಲಕನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ನರ್ಸ್ ಗಾಯಕ್ಕೆ ಹೊಲಿಕೆ ಹಾಕುವುದರ ಬದಲಿಗೆ ಫೆವಿಕ್ವಿಕ್ ಗಮ್ ಅಂಟಿಸಿದ್ದಾಳೆ.
ಇನ್ನೂ ನರ್ಸ್ ಫೆವಿಕ್ವಿಕ್ ಹಾಕುವಂತಹ ವಿಡಿಯೋವನ್ನು ಬಾಲಕನ ಪೋಷಕರು ಮೊಬೈಲ್ ನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ಸಹ ನೀಡಿದ್ದಾರೆ. ಈ ಸಂಬಂಧ ವರದಿ ಪಡೆದುಕೊಂಡ ಡಿ.ಹೆಚ್.ಒ ರಾಜೇಶ್ ಸುರಗಿಹಳ್ಳಿ ರವರು ನರ್ಸ್ ಜ್ಯೋತಿ ರವರನ್ನು ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಿ ಆದೇಶ ಮಾಡಿದ್ದಾರೆ. ಆದರೆ ಕರ್ತವ್ಯ ಲೋಪ ಎಸಗಿದ ನರ್ಸ್ ರವರನ್ನು ಅಮಾನತ್ತು ಮಾಡಲು ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.
ಇನ್ನೂ ಬಾಲಕನಿಗೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದು ಏಕೆ ಎಂದು ಕೇಳಿದಾಗ ನರ್ಸ್ ಜ್ಯೋತಿ ಬೇಜವಬ್ದಾರಿ ಹಾರಿಕೆ ನೀಡಿದ್ದಾರೆ ಎನ್ನಲಾಗಿದೆ. ಸ್ಟಿಚ್ ಹಾಕಿದರೇ ಬಾಲಕನ ಕೆನ್ನೆಯ ಮೇಲೆ ಕಲೆ ಆಗ್ತಾ ಇತ್ತು. ಆದ್ದರಿಂದ ಚರ್ಮದ ಮೇಲಷ್ಟೆ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ. ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಕೊಟ್ಟಿದ್ದೇನೆ. ನೀವು ಫೆವಿಕ್ವಿಕ್ ಹಚ್ಚಬೇಡಿ ಅಂತಾ ಹೇಳಿದ್ರೆ ಬೇರೆ ಕಡೆ ರೆಫರ್ ಮಾಡುತ್ತಿದ್ದೇವು ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇನ್ನೂ ಇದೊಂದು ಆಕಸ್ಮಿಕವಾದುದಲ್ಲ ಬದಲಿಗೆ ಇದು ನಿರ್ಲಕ್ಷ್ಯ, ಬೇಜವಾಬ್ದಾರಿತನ ಆಗಿದ್ದು ನರ್ಸ್ ಮೇಲೆ ಕಾನೂನಿನಂತೆ ಕ್ರಮ ತೆಗೆದುಕೊಂಡು ನರ್ಸ್ ಜ್ಯೋತಿಯನ್ನು ಅಮಾನತ್ತು ಮಾಡಬೇಕೆಂದು ಬಾಲಕನ ಪೋಷಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.