NREGA – ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾದುದಾಗಿದ್ದು, ಮಹಿಳೆಯರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ನರೇಗಾ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಉಲ್ಲೋಡು ಗ್ರಾ.ಪಂ ಪಿಡಿಒ ಅರ್ಚನಾ ಮಹಿಳೆಯರಿಗೆ ಸಲಹೆ ನೀಡಿದರು.
NREGA – ಮಹಿಳೆಯರಿಗೆ ಸಮಾನ ಅವಕಾಶ
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾ.ಪಂ ಆವರಣದಲ್ಲಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಪರಿವರ್ತನ ಅಭಿಯಾನ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸ್ತ್ರೀ ಚೇತನ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ನೀಡಲು ನರೇಗಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ವಿಶೇಷ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಂಬಲರಾಗಬೇಕು.

ಮಹಿಳಾ ಕೂಲಿಕಾರಿಗೆಂದೇ ಪ್ರತ್ಯೇಕವಾಗಿ ಮಹಿಳಾ ಸಮುದಾಯ ಕಾಮಗಾರಿ ಆರಂಭಿಸಿ ಮಹಿಳಾ ಕೂಲಿಕಾರರಿಗೆ ಕೆಲಸ ನಿಡಲಾಗುತ್ತದೆ ಈ ಯೋಜನೆಯಡಿಯಲ್ಲಿ ಕಾಯಕ ಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಮಹಿಳೆಯರಿಗೆ ನರೇಗಾ ಯೋಜನೆಯಡಿಯಲ್ಲಿ ಲಿಂಗ ತಾರತಮ್ಯ ಇಲ್ಲದೆ ಸಮಾನ ಕೂಲಿ ನೀಡಲಾಗುತ್ತಿದೆ. ಖಾಸಗಿ ಬ್ಯಾಂಕ್ ಗಳಲ್ಲಿ ಹೆಚ್ಚು ಬಡ್ಡಿ ವಿಧಿಸಲಾಗುತ್ತಿದೆ ಹಾಗಾಗಿ ಸ್ವ ಸಹಾಯ ಸಂಘಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದುಕೊಂಡು ಕುಟುಂಬ ಹಾಗೂ ಮಕ್ಕಳ ವಿದ್ಯಾಬ್ಯಾಸ ಜೊತೆಗೆ ಕೈಗಾರಿಕೆ, ಉದ್ದಿಮೆಯಲ್ಲಿ ಸೇರಿದಂತೆ ಎಲ್ಲಾ ರಂಗದಲ್ಲೂ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
NREGA – ಆರ್ಥಿಕ ಪ್ರೋತ್ಸಾಹ ಮತ್ತು ಗ್ರಾಮಾಭಿವೃದ್ಧಿ
ನಂತರ ತಾಲೂಕು ಮಾಹಿತಿ ಶಿಕ್ಷಣ ಸಂಯೋಜಕ ರಾಮಾಂಜಿ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಮಹಿಳಾ ಕೂಲಿಕಾರರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಹಾಗೂ ಮ-ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕ ಮಹಿಳೆಯರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡುವ ಉದ್ದೇಶದಿಂದ ಪ್ರತಿ ಪಂಚಾಯಿತಿಯಲ್ಲಿ ಕೂಸಿನ ಮನೆ ಪ್ರಾರಂಭ ಮಾಡಲಾಗಿದೆ. ಇಲ್ಲಿ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಪೋಷಣೆ, ರಕ್ಷಣೆ, ಪಾಲನೆ ಹಾಗೂ ಪೌಷ್ಠಿಕತೆ ಹೆಚ್ಚಳಕ್ಕೆ ಈ ಕೇಂದ್ರ ಬಹುದೊಡ್ಡ ಹೆಜ್ಜೆಯನ್ನಿರಿಸಿದೆ. ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಇರಿಸಿ ನೆಮ್ಮದಿಯಿಂದ ಕೂಲಿ ಮಾಡಬಹುದಾಗಿದೆ. ಒಂದು ಉದ್ಯೋಗ ಚೀಟಿಯಲ್ಲಿ ಜೀವಿತಾವಧಿಯಲ್ಲಿ 5 ಲಕ್ಷವರೆಗೆ ಪ್ರೋತ್ಸಾಹ ಹಣ ನೀಡಲಾಗುತ್ತಿದೆ ಗಂಡು ಹೆಣ್ಣಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಪ್ರತಿ ವರ್ಷ 100 ದಿನ ಮಾನವ ದಿನಗಳ ಲೆಕ್ಕದಲ್ಲಿ ವರ್ಷಕ್ಕೆ ₹37 ಸಾವಿರ ಹಣ ನೀಡಲಾಗುತ್ತದೆ. ನರೇಗಾ ದುಡಿಯುವ ಕೈಗಳಿಗೆ ಕೆಲಸ ನೀಡುವ ಜತೆಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಹೊಂದಿದೆ. ಪಂಚತಂತ್ರ ಹಾಗೂ ಕುಡಿಯುವ ನೀರು ಮತ್ತು ನರೇಗಾ ಯೋಜನೆಯ ಸಮಸ್ಯಗೆ ಏಕಿಕೃತ ಸಹಾಯವಾಣಿ 8277506000 ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.
Read this also : ಮಹತ್ವ, ಪೂಜಾ ವಿಧಾನ ಮತ್ತು ಆಚರಣೆಯ ವಿವರ, ರಾಮನವಮಿ ಎಂದರೇನು? ಇದರ ಮಹತ್ವ ತಿಳಿಯಿರಿ
NREGA – ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಈ ವೇಳೆ ಎನ್. ಆರ್. ಎಲ್. ಎಂ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಆಂಜನೇಯಪ್ಪ ರವರು ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮಲ, ಎನ್. ಆರ್. ಎಲ್. ಎಂ ಯೋಜನೆಯ ವಲಯ ಮೇಲ್ವಿಚಾರಕಿ ಮೀನ ಕೃಷಿಯೇತರ ವ್ಯವಸ್ಥಾಪಕರಾದ ಚೇತನ್ ಸೇರಿದಂತೆ ಹಲವರು ಇದ್ದರು.