ಕೆಲವು ದಿನಗಳ ಹಿಂದೆಯಷ್ಟೆ ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಸಂಘರ್ಷದಲ್ಲಿ ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳ ಮೇಲೆ ಧಾಳಿಗಳು ಹೆಚ್ಚಾಗಿತ್ತು. ಈ ಸಂಬಂಧ (Bangladesh) ಕೆಲವೊಂದು ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಬಾಂಗ್ಲಾದ ಹಿಂದೂಗಳಿಗೆ ಮುಸ್ಲಿಂ ಸಂಘಟನೆ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದೆ. ಅದರಂತೆ ದುರ್ಗಾ ಪೂಜೆಯಂದು ಸಾರ್ವತ್ರಿಕ ರಜೆ ನೀಡಬಾರದು ಹಾಗೂ ದುರ್ಗಾ ಮಾತೆಯ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಬಾರದು ಎಂದು ಬಹಿರಂಗ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ಬಾಂಗ್ಲಾದ ಹಿಂದೂಗಳ ಮೇಲಿನ ದಾಳಿ ನಿಲ್ಲಿಸುವಂತೆ ಭಾರತ ಮನವಿ ಜೊತೆಗೆ ಆಕ್ರೋಷವನ್ನು ಸಹ ಹೊರಹಾಕುತ್ತಿದ್ದರೂ ಸಹ ಹಿಂದೂಗಳ ಮೇಲಿನ ದಾಳಿ ಕಡಿಮೆಯಾಗುತ್ತಿಲ್ಲ ಎಂದು ಹೇಳಲಾಗಿದೆ. ಇದೀಗ ಹಿಂದೂಗಳಿಗೆ ಮತ್ತೊಂದು ಎಚ್ಚರಿಕೆಯನ್ನು ಅಲ್ಲಿನ ಮುಸ್ಲಿಂ ಸಂಘಟನೆ ನೀಡಿದೆ ಎನ್ನಲಾಗಿದೆ. ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಎಂಬ ಹೆಸರಿನ ಮುಸ್ಲೀಂ ಸಂಘಟನೆ ಢಾಕಾದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪತ್ರಿಭಟನೆ ನಡೆಸಿದೆ. ರಸ್ತೆಗಳನ್ನು ಮುಚ್ಚುವ ಮೂಲಕ ಎಲ್ಲೂ ಪೂಜೆ ಮಾಡಬಾರದು, ವಿಗ್ರಹ ವಿಸರ್ಜನೆ ಮಾಡಿದರೇ ನೀರು ಮಲಿನವಾಗುತ್ತದೆ ಆದ್ದರಿಂದ ಯಾರೂ ದುರ್ಗಾ ಪೂಜೆಯನ್ನು ಆಚರಿಸಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿದುಬಂದಿದೆ.
ಸದ್ಯ ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳು ಶೇ.2 ಕ್ಕಿಂತ ಕಡಿಮೆಯಿರುವ ಕಾರಣ ದುರ್ಗಾ ಪೂಜೆಯಂದು ಸಾರ್ವತ್ರಿಕ ರಜೆ ನೀಡಬಾರದು. ರಜೆ ನೀಡುವುದರಿಂದ ಬಾಂಗ್ಲಾದ ಬಹುಸಂಖ್ಯಾತರಾದ ಮುಸ್ಲೀಂರಿಗೆ ಸಮಸ್ಯೆಯಾಗಲಿದೆ. ಧಾರ್ಮಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಿಂದೂ ಹಬ್ಬಗಳಲ್ಲಿ ಯಾವುದೇ ಮುಸ್ಲೀಂರು ಭಾಗಿಯಾಗಬಾರದು ಎಂದು ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಸದಸ್ಯರು ಸೂಚನೆ ನೀಡಿದ್ದಾರೆ. ಜೊತೆಗೆ 16 ಅಂಶಗಳ ಬೇಡಿಕೆಯನ್ನು ಸಹ ಸಂಘಟನೆ ಮುಂದಿಟ್ಟಿದೆ.
ಹಿಂದೂಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ರಸ್ತೆಗಳನ್ನು ಮುಚ್ಚುವಂತಿಲ್ಲ. ಹಿಂದೂಗಳು ಆಟದ ಮೈದಾನದಲ್ಲಿ ದುರ್ಗಾ ಪೂಜೆಯನ್ನು ಮಾಡಬಾರದು. ಬಾಂಗ್ಲಾದ ಭೂಮಿಯಲ್ಲಿ ನಿರ್ಮಾಣ ಆಗಿರುವಂತಹ ದೇವಾಲಯಗಳು ಅಕ್ರಮವಾಗಿ ನಿರ್ಮಾಣವಾಗಿದೆ. ಅವುಗಳನ್ನೆಲ್ಲಾ ಕೆಡವಬೇಕು. ಭಾರತವು ಬಾಂಗ್ಲಾದೇಶದ ರಾಷ್ಟ್ರೀಯ ಶತ್ರುವಾಗಿದೆ. ಆದ್ದರಿಂದ ಬಾಂಗ್ಲಾದ ಹಿಂದೂಗಳು ಭಾರತದ ವಿರೋಧಿಯಾಗಲು ಒಪ್ಪಿಕೊಳ್ಳಬೇಕು. ಭಾರತ ವಿರೋಧಿ ಬ್ಯಾನರ್ ಹಾಗೂ ಘೊಷಣೆಗಳನ್ನು ಬಾಂಗ್ಲಾದ ಹಿಂದೂ ದೇವಾಲಯಗಳಲ್ಲಿ ಪ್ರದರ್ಶನ ಮಾಡಬೇಕೆಂಬ ಬೇಡಿಕೆಯನ್ನು ಸಹ ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಸಂಘಟನೆ ಇಟ್ಟಿದೆ.