ಇಂದು ಅನೇಕರಿಗೆ ಮಕ್ಕಳು ಆಗದಿರುವ ಕಾರಣದಿಂದ ಆಸ್ಪತ್ರೆಗಳು, ದೇವರ ಮೊರೆ ಹೋಗುತ್ತಿರುತ್ತಾರೆ. ಆದರೆ ಕೆಲವರಿಗೆ ಮಗು ಆದರೂ ಸಹ ಕೆಲವೊಂದು ಕಾರಣಗಳಿಂದ ಮಗುವನ್ನು ಕೊಲೆ ಮಾಡುವಂತಹ ಅಮಾನವೀಯ ಕೃತ್ಯಗಳಿಗೆ ಮುಂದಾಗುತ್ತಾರೆ. ಅಂತಹುದೇ ಘಟನೆಯೊಂದು ಆನೇಕಲ್ ತಾಲೂಕಿನ ವ್ತಾಪ್ತಿಯಲ್ಲಿ ನಡೆದಿದೆ. ನಿರ್ಜನ ಪ್ರದೇಶದ (Newborn Baby) ತೋಪಿನೊಂದರಲ್ಲಿ ಗಂಡು ಮಗುವನ್ನು ಜೀವಂತವಾಗಿಯೇ ಹೂತು ಹಾಕಿ ಹೋಗಿದ್ದಾರೆ.
ಗಂಡು ಮಗು ಹುಟ್ಟಿದ ಒಂದೇ ದಿನಕ್ಕೆ ಮಗುವನ್ನು ಜೀವಂತವಾಗಿಯೇ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ ಪಾಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಇಂದು (ಸೆ.30) ರಂದು ಬೆಳಿಗ್ಗೆ ಕೆಲ ಸ್ಥಳೀಯರು ಈ ತೋಪಿಗೆ ಹೋಗಿದ್ದಾರೆ. ಈ ಸಮಯದಲ್ಲಿ ಮಗುವಿನ ಕಿರುಚಾಟ, ಚೀರಾಟ ಕೇಳಿಬಂದಿದೆ. ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ರವರ ತಂಡ ಮಗುವನ್ನು ಹೂತು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನೂ ಅನೇಕರು ತಮಗೆ ಮಕ್ಕಳಾಗಲಿಲ್ಲ ಅಂತಾ ಕೊರಗುತ್ತಿರುತ್ತಾರೆ. ಆದರೆ ಇಲ್ಲಿ ಕೆಲ ದುರುಳರು ಮಾತ್ರ ಇನ್ನೂ ಸರಿಯಾಗಿ ಕಣ್ಣೇ ಬಿಡದಂತಹ ಕಂದಮ್ಮನನ್ನು ಜೀವಂತವಾಗಿ ಹೂತುಹಾಕಿದ್ದಾರೆ. ಇನ್ನೂ ಮಣ್ಣಿನಲ್ಲಿ ಚೀರಾಡುತ್ತಿದ್ದ ಮಗುವಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಮಗುವಿಗೆ ದೊಮ್ಮಸಂದ್ರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಾಣಿ ವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.