OYO Rooms – ಇತ್ತೀಚಿಗೆ ಪ್ರಯಾಣಿಕರು ಸೇರಿದಂತೆ ರೂಂಗಳಲ್ಲಿ ಉಳಿದುಕೊಳ್ಳಲು ಹೆಚ್ಚಾಗಿ OYO Rooms ಗಳನ್ನು ಬಳಸುತ್ತಾರೆ. ಆದರೆ ಈ OYO Room ಗಳ ಬಗ್ಗೆ ಕೆಲವೊಂದು ಬೇರೆಯದ್ದೆ ಮಾತುಗಳೂ ಸಹ ಕೇಳಿಬರುತ್ತಿವೆ. ಇದೀಗ OYO Room ಬುಕ್ ಮಾಡಲು ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಮದುವೆಯಾಗದ ಜೋಡಿಗಳಿಗೆ ಹೋಟೆಲ್ ರೂಂ ಗಳನ್ನು ನೀಡದಂತೆ ತನ್ನ ಪಾಲುದಾರ ಹೋಟೆಲ್ ಗಳಿಗೆ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಒಯೋ ಹೊರಡಿಸಿದ್ದು, ಇದು ಮೊದಲ ಹಂತದಲ್ಲಿ ಮೀರತ್ ನಿಂದ ಜಾರಿಗೊಳಿಸಲು ಶುರು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.

ಓಯೋ ಹೋಟೆಲ್ (OYO Hotel Rooms) ಬುಕ್ಕಿಂಗ್ ಕಂಪನಿ ಚೆಕ್ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮದಂತೆ ಇನ್ಮುಂದೆ ಅವಿವಾಹಿತ ಪುರುಷ – ಮಹಿಳಾ ಜೋಡಿಗೆ ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಹೇಳಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್‌ಗಳು ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್ ಇನ್ ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಆದರೆ ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
ಈ ಹೊಸ ನಿಯಮದಂತೆ ಪುರುಷ ಮತ್ತು ಮಹಿಳಾ ಜೋಡಿಗಳು ಆನ್ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ. ಜೊತೆಗೆ ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್‌ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ. ಒಟ್ಟಾರೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ ಎನ್ನಲಾಗಿದೆ.

ಸದ್ಯ ಈ ಹೊಸ ನಿಯಮ ಮೀರತ್ ನಲ್ಲಿ ಜಾರಿಯಾಗಿದೆ. ಮೀರತ್ ನಲ್ಲಿರುವ ತನ್ನ ಪಾಲುದಾರ ಹೋಟೆಲ್ ಗಳಿಗೆ ಈ ಹೊಸ ನಿರ್ದೇಶನ ನೀಡಿದೆ. ಮುಂದಿನ ದಿನಗಳಲ್ಲಿ ಈ ನಿಯಮ ಮತ್ತಷ್ಟು ನಗರಗಳಿಗೆ ವಿಸ್ತರಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್ ಏರ್ಪಡಿಸುವುದು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಅಖಿಲ ಭಾರತ ಮಟ್ಟದಲ್ಲಿ ಓಯೋ ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.