Natural Farming Awareness – ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ರಾಸಾಯನಿಕಗಳ ಅಂಶ ಸೇರಿಕೊಂಡಿದೆ. ಇದಕ್ಕೆ ಕಾರಣ, ರೈತರು ಅತಿಯಾಗಿ ರಾಸಾಯನಿಕ ಕೃಷಿ ಪದ್ಧತಿಗಳನ್ನು ಅವಲಂಬಿಸುತ್ತಿರುವುದು. ಆದರೆ, ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ, ಗುಡಿಬಂಡೆಯ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಅವರು, ರೈತರು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಆಹಾರ ಬೆಳೆಯುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.

Natural Farming Awareness – ಕೃಷಿ ವಿದ್ಯಾರ್ಥಿಗಳಿಂದ ನೈಸರ್ಗಿಕ ಕೃಷಿ ಜಾಗೃತಿ ಕಾರ್ಯಾಗಾರ
ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ದೇಶದ ಕೃಷಿ ಕ್ಷೇತ್ರದ ಸುಸ್ಥಿರತೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಯುವ ಕೃಷಿ ವಿದ್ಯಾರ್ಥಿಗಳು ಈ ಕುರಿತು ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಮತ್ತು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯಬಹುದು ಎಂದರು.
Natural Farming Awareness – ನೈಸರ್ಗಿಕ ಕೃಷಿಯ ಪಾಠ: ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಮಾಹಿತಿ
ಇನ್ನೂ ಈ ಸಮಯದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ನೈಸರ್ಗಿಕ ಕೃಷಿಯ ಮೂಲಭೂತ ತತ್ವಗಳು, ಅದರ ಪ್ರಯೋಜನಗಳು, ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡುವ ವಿಧಾನಗಳ ಬಗ್ಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿವರವಾಗಿ ಮಾಹಿತಿ ನೀಡಿದರು. ಆಧುನಿಕ ಕೃಷಿ ಪದ್ಧತಿಗಳಿಂದ ಉಂಟಾಗುವ ಸವಾಲುಗಳು ಮತ್ತು ನೈಸರ್ಗಿಕ ಕೃಷಿ ಹೇಗೆ ಸುಸ್ಥಿರ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ ಎಂಬುದರ ಕುರಿತು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿದರು.
Read this also : ದಪ್ಪರ್ತಿ ಗ್ರಾಮದಲ್ಲಿ RAWE ಕಾರ್ಯಕ್ರಮಕ್ಕೆ ಚಾಲನೆ: ರೈತರಿಗೆ ನೂತನ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ
Natural Farming Awareness – ಜಾಗೃತಿ ಮೂಡಿಸಿದ ಕೃಷಿ ವಿದ್ಯಾರ್ಥಿಗಳು
ಮುಖ್ಯವಾಗಿ ವಿದ್ಯಾರ್ಥಿಗಳು ಬೀದಿ ನಾಟಕಗಳು, ಭಿತ್ತಿಪತ್ರಗಳ ಪ್ರದರ್ಶನ ಮತ್ತು ಸಂವಾದಗಳ ಮೂಲಕ ನೈಸರ್ಗಿಕ ಕೃಷಿಯ ತತ್ವಗಳನ್ನು ಸರಳವಾಗಿ ಜನರಿಗೆ ತಲುಪಿಸಿದರು. ದಪ್ಪರ್ತಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಕಾರ್ಯಾಗಾರದ ಭಾಗವಾಗಿ ಜೀವಾಮೃತ ತಯಾರಿಕೆ ಮತ್ತು ಬಳಕೆ, ಬೀಜಾಮೃತ, ಘನಜೀವಾಮೃತ, ಮಲ್ಚಿಂಗ್ (ಹಸಿರು ಹೊದಿಕೆ), ಅಂತರ ಬೆಳೆ ಮತ್ತು ಬಹುಬೆಳೆ ಪದ್ಧತಿ, ಬೆಳೆ ಪರಿವರ್ತನೆ ಮೊದಲಾದ ನೈಸರ್ಗಿಕ ಕೃಷಿ ಪದ್ದತಿಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳಾದ ಧನವಂತ್ ಗೌಡ, ಅಮೃತ ವರ್ಷಿಣಿ, ಅಶ್ವಿನಿ, ಭೂಮಿಕಾ, ಚಿನ್ಮಯಿ, ದಿಶಾ ಪ್ರಸನ್ನ, ಗಿರಿಜಾ, ಜ್ಯೋತಿ, ತೇಜಸ್ವಿನಿ, ಅಭಿಷೇಕ್, ದೀಪಕ್ ಸೇರಿದಂತೆ ಗ್ರಾಮದ ಮುಖಂಡರು, ಕೃಷಿಕರು ಹಾಜರಿದ್ದರು.
