Teachers Day – ಕಾಲಕ್ಕೆ ತಕ್ಕಂತೆ ವೃತ್ತಿಯ ಪಾವಿತ್ರ್ಯತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು, ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಾಗೇಪಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

Teachers Day – ಗುರು ಸ್ಥಾನಕ್ಕೆ ಸಿಗುವ ಗೌರವ
ಶಾಸಕ ಸುಬ್ಬಾರೆಡ್ಡಿ ಮಾತನಾಡಿ, “ಶಿಕ್ಷಕ ಕೇವಲ ವ್ಯಕ್ತಿಯಲ್ಲ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ. ಇಡೀ ವಿಶ್ವದಲ್ಲಿಯೇ ಶಿಕ್ಷಕರಿಗೆ ಗುರುಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಇದು ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ. ಈ ಗೌರವವನ್ನು ಕಾಪಾಡಿಕೊಳ್ಳುವುದು ಶಿಕ್ಷಕರ ಆದ್ಯ ಕರ್ತವ್ಯ” ಎಂದು ಹೇಳಿದರು. ಮಕ್ಕಳಲ್ಲಿ ನಕಾರಾತ್ಮಕ ಭಾವನೆಗಳ ಬದಲಿಗೆ ಸಕಾರಾತ್ಮಕ ಭಾವನೆಗಳನ್ನು ತುಂಬುವಂತೆ ಅವರು ಶಿಕ್ಷಕರಿಗೆ ಕರೆ ನೀಡಿದರು.
Teachers Day – 2.5 ಕೋಟಿ ವೆಚ್ಚದಲ್ಲಿ ಗುರು ಭವನ ನಿರ್ಮಾಣ
ಶಿಕ್ಷಣದಿಂದ ಯಾವುದೇ ಮಗು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದಾಗಿ ಶಾಸಕರು ತಿಳಿಸಿದರು. ಅಲ್ಲದೆ, ಬಾಗೇಪಲ್ಲಿಯಲ್ಲಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಗುರು ಭವನವನ್ನು ನಿರ್ಮಿಸಿ, ಮುಂದಿನ ವರ್ಷದ ಶಿಕ್ಷಕರ ದಿನಾಚರಣೆಗೆ ಹಸ್ತಾಂತರಿಸುವುದಾಗಿ ಶಿಕ್ಷಕರಿಗೆ ಭರವಸೆ ನೀಡಿದರು. Read this also : ಜನಸ್ಪಂದನಾ ಸಭೆ ಮಾಡೋದು ಜನರ ಸೌಲಭ್ಯಕ್ಕಾಗಿ, ಆಡಂಬರ ಮಾಡೋಕೆ ಅಲ್ಲ: ಶಾಸಕ ಸುಬ್ಬಾರೆಡ್ಡಿ

ಸನ್ಮಾನ ಮತ್ತು ಮೆರವಣಿಗೆ
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮೊದಲು, ಪಟ್ಟಣದ ಡಿ.ವಿ.ಜಿ. ಮುಖ್ಯ ರಸ್ತೆಯಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮನೀಷಾ ಎನ್. ಪತ್ರಿ, ತಾ.ಪಂ. ಇಒ ರಮೇಶ್, ಬಿಇಒ ಎನ್. ವೆಂಕಟೇಶಪ್ಪ, ನ್ಯೂಹಾರಿಜನ್ ಶಾಲೆಯ ಶ್ರೀನಿವಾಸ ರೆಡ್ಡಿ, ಯಂಗ್ ಇಂಡಿಯಾಗ ಶಾಲೆ ವ್ಯವಸ್ಥಾಪಕ ಪ್ರೋ. ಡಿ.ಶಿವಣ್ಣ, ಪಿ.ವಿ.ವೆಂಕಟರವಣ, ಸಿ.ವೆಂಕಟರಾಯಪ್ಪ ,ಡಿ.ಎನ.ರಘುನಾಥ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಸದಸ್ಯರಾದ ಎ.ನಂಜುಂಡಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಿ ಹಾಗೂ ಖಾಸಗಿ ಶಾಲೆ ಶಿಕ್ಷಕರು ಇದ್ದರು.
