ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (MLA Munirathna) ರವರು ಗುತ್ತಿಗೆದಾರ ಚೆಲುವರಾಜು ರವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ತಲೆಮರೆಸಿಕೊಂಡಿದ್ದು, ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಶಾಸಕ ಮುನಿರತ್ನ ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದಾಗ ಅವರ ಮೊಬೈಲ್ ಪೋನ್ ಲೊಕೇಷನ್ ಆಧರಿಸಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಸದ್ಯ ಮುನಿರತ್ನರನ್ನು ವಶಕ್ಕೆ ಪಡೆದಿದ್ದು, ಕೋಲಾರ ಪೊಲೀಸರು ಬೆಂಗಳೂರಿನ ಪೋಲಿಸರಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಮುನಿರತ್ನ ರವರು ಗುತ್ತಿಗೆದಾರ ಚೆಲುವರಾಜು ರವರಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರವರಿಗೆ ದೂರು ನೀಡಿ, ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಜೀವ ಬೆದರಿಕೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಪ್ರಮುಖ ಆರೋಪಿ ಶಾಸಕ ಮುನಿರತ್ನ ಆಗಿದ್ದಾರೆ ಎನ್ನಲಾಗಿದೆ. A2 ಆರೋಪಿ ಮುನಿರತ್ನರವರ ಆಪ್ತ ಸಹಾಯಕ ವಿಜಯಕುಮಾರ್, A3 ಅವರ ಸೆಕ್ಯೂರಿಟಿ ಅಭಿಷೇಕ್ ಹಾಗೂ A4 ವಸಂತ್ ಕುಮಾರ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸೆ.9 ರಂದು ಶಾಸಕ ಮುನಿರತ್ನ 20 ಲಕ್ಷ ರೂಪಾಯಿ ಹಣ ಕೊಡುವಂತೆ ಕೇಳಿದ್ದರು. ದುಡ್ಡ ಕೊಡದೇ ಇದ್ದರೇ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜು ಆರೋಪ ಮಾಡಿದ್ದರು. ಈ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ದತೆ ನಡೆಸಿದ್ದರು. ಅದಾಗಲೇ ಮುನಿರತ್ನ ನಾಪತ್ತೆಯಾಗಿದ್ದರು. ಈ ಪ್ರಕರಣದ ಸಂಬಂಧ ಆಡಿಯೋ ಒಂದು ಸಹ ವೈರಲ್ ಆಗಿತ್ತು. ಆದರೆ ಈ ಆಡಿಯೋ ತನ್ನದಲ್ಲ, ಒಂದು ವೇಳೆ ಆ ಆಡಿಯೋ ನನ್ನದೇ ಎಂದು ಸಾಬೀತಾದರೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸಹ ಹೇಳಿದ್ದರು.