Micro Finance – ಸದ್ಯ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದೀಗ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಎಂಬ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ವಿವಿಧ ಸಂಸ್ಥೆಗಳಲ್ಲಿ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಮೃತ ಗಿರೀಶ್ ಕಳೆದ 2 ವರ್ಷಗಳಿಂದ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಫೆ.2 ರ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಮೈಕ್ರೋ ಫೈನಾನ್ಸ್ ಗಳಲ್ಲಿ ಸುಮಾರು 13 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದನಂತೆ. ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಮೃತರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ.
ಈ ಕುರಿತು ಗ್ರಾಮದ ಹಿರಿಯ ಮುಖಂಡ ಅಶ್ವತ್ಥಪ್ಪ ಮಾತನಾಡಿ ಮೃತ ಗಿರೀಶ್ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲು ತುಂಬಾನೇ ಕಷ್ಟ ಪಡುತ್ತಿದ್ದ. ಹೆಂಡತಿ ಹೆಸರಿನಲ್ಲಿ ಮೊಬೈಲ್ ಖರೀದಿಗಾಗಿ ಸಾಲ, ತಾಯಿಯ ಹೆಸರಿನಲ್ಲಿ ಟ್ರಾಕ್ಟರ್ ಖರೀದಿ ಮಾಡಲು ಸಾಲ ಮಾಡಿದ್ದ. ಸಾಲ ಕಟ್ಟಲು ಆಗದೆ ಟ್ರಾಕ್ಟರ್ ಸಹ ಸೀಜ್ ಮಾಡಲಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹೆ ಮಾಡಲಾಗಿದೆ. ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.