ದೇಶದ ಅನೇಕ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲ ಉಂಟಾಗಿತ್ತು. ಜತೆಗೆ ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿತ್ತು. ಸದ್ಯ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು, ರಾಜ್ಯದ ಅಲ್ಲಿಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇನ್ನೂ ಮಳೆ, ಗುಡುಗು, ಮಿಂಚು ಗಳ ಬಗ್ಗೆ ಜನಸಾಮಾನ್ಯರೂ ಸಹ ತಿಳಿದುಕೊಳ್ಳಬಹುದು. ಜನರು ಯಾವ ರೀತಿ ಮಳೆಯ ಅಪ್ಡೇಟ್ ಪಡೆಯಬಹುದು ಎಂಬುದನ್ನು ಮೈಸೂರಿನ ಕೃಷಿ ಹವಾಮಾನ ಕ್ಷೇತ್ರದ ಸಹ ಸಂಶೋಧಕ ಡಾ.ಸುಮಂತ್ ಕುಮಾರ್ ತಿಳಿಸಿಕೊಟ್ಟಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣಗಳ ಹಿನ್ನೆಲೆಯಲ್ಲಿ ಮಳೆಯ ಬಗ್ಗೆ ಅಪ್ಡೇಟ್ಸ್ ತಿಳಿದುಕೊಳ್ಳುವ ಬಯಕೆ ಇರುತ್ತದೆ. ಅದರಲ್ಲೂ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮಳೆಯ ಮಾಹಿತಿ ಅತ್ಯವಶ್ಯಕ ಎಂದೇ ಹೇಳಬಹುದಾಗಿದೆ. ಈ ಹಿಂದೆ ವಾತವಾರಣದಲ್ಲಿನ ಬದಲಾವಣೆ, ನಕ್ಷತ್ರಗಳ ಸೇರಿದಂತೆ ಕೆಲವೊಂದು ಪದ್ದತಿಗಳ ಮೂಲಕ ಮಳೆ ಯಾವಾಗ ಬರಬಹುದು ಎಂದು ಅಂದಾಜಿಸಲಾಗುತ್ತಿತ್ತು. ಇದೀಗ ತಂತ್ರಜ್ಞಾನದ ಸಹಾಯದಿಂದ ಮಾಹಿತಿ ತಿಳಿಯಬಹುದಾಗಿದೆ. ಬಹುತೇಕ ಎಲ್ಲಾ ಸ್ಮಾರ್ಟ್ ಪೋನ್ ಗಳಲ್ಲಿ weather report APP ಇರುತ್ತದೆ. ಈ ಆ್ಯಪ್ ಮೂಲಕ ವಾತಾವರಣದ ಮಾಹಿತಿಯನ್ನು ಪಡೆಯಬಹುದಾಗಿದೆ. ಇದೀಗ ಮತ್ತಷ್ಟು ಆ್ಯಪ್ ಗಳ ಬಗ್ಗೆ ಸಂಶೋಧಕ ಡಾ.ಸುಮಂತ್ ಕುಮಾರ್ ಎಂಬುವವರು ಮಾಹಿತಿ ನೀಡಿದ್ದಾರೆ.
ಇನ್ನೂ ಸಂಶೋಧಕಾ ಡಾ.ಸುಮಂತ್ ಕುಮಾರ್ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಾತಾವರಣದ ಬಗ್ಗೆ ಅಧ್ಯಯನ ನಡೆಸಿ ಮುಂದಿನ 5 ದಿನಗಳ ಹವಾಮಾನ ಮಾಹಿತಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಮಳೆಯ ಪ್ರಮಾಣ, ಆರ್ದ್ರತೆ, ಗಾಳಿಯ ವೇಗ ಎಲ್ಲ ಮಾಹಿತಿಯ ಜೊತೆಗೆ ವಾತಾವರಣದಲ್ಲಿನ ಬದಲಾವಣೆಯಿಂದ ಕೃಷಿ ಬೆಳೆಗಳ ಮೇಲಾಗುವ ಪರಿಣಾಮದ ಬಗ್ಗೆ ಸಹ ಮಾಹಿತಿ ನೀಡುತ್ತಾರೆ. ಇನ್ನೂ ನಿಮ್ಮ ವ್ಯಾಪ್ತಿಯ ಮಳೆಯ ಪ್ರಮಾಣ, ವಾತಾವರಣದ ಬಗ್ಗೆ ಸಾರ್ವಜನಿಕರೂ ಸಹ ಮಾಹಿತಿ ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಮೌಸಮ್, ಮೇಘಧೂತ್ ಎಂಬ ಮೊಬೈಲ್ ಆ್ಯಪ್ ಗಳನ್ನು ಬಳಸಿಕೊಂಡು ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.