ಸದ್ಯ ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ, ರಾಜ್ಯದ ಹಲವು ಕಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಕರಾವಳಿಯ ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸುಮಾರು 10 ದಿನಗಳಾಗಿದೆ. ಆದರೆ ನೆರೆ ಕಡಿಮೆಯಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೆರೆ ಹಾನಿ ಪ್ರದೇಶ ವೀಕ್ಷಣೆ ಮಾಡಲು ಬಂದಿದ್ದರಿಂದ ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ.
ಉಡುಪಿಯಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದೆ. ಗಾಳಿ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ ಜೊತೆಗೆ ಸಾವು ನೋವುಗಳೂ ಸಹ ಸಂಭವಿಸಿದೆ. ಅದರಲ್ಲೂ ಭಾರಿ ಮಳೆಗೆ ನದಿ ಪಾತ್ರದಲ್ಲಿ ವಾಸ ಮಾಡುವಂತಹ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಇಲ್ಲಿಯವರೆಗೂ ಈ ಭಾಗಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿಲ್ಲ. ನೆರೆ ಇಳಿಯಾಗುತ್ತಿದ್ದಂತೆ ಅವರು ನೆರೆ ಪ್ರವಾಸ ಕೈಗೊಂಡಿದ್ದು, ಗುಜ್ಜರಬೆಟ್ಟು ಕಡಲಕೊರೆತ ಆದ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸಮುದ್ರ ಕೊರೆತದ ಜಾಗಕ್ಕೆ ಸೂಕ್ತ ಕಲ್ಲುಗಳನ್ನು ಜೋಡಿಸಲು ಸೂಚನೆ ನೀಡಿದ್ದಾರೆ.
ಇನ್ನೂ ಉಡುಪಿಯ ನಾವುಂದ, ಬಡಾಕೆರೆ, ಸಾಲ್ಚುಡ ಭಾಗದ ಸುಮಾರು ಮನೆಗಳು ಜಲಾವೃತಗೊಂಡಿದೆ. ಸೋಮೇಶ್ವರ ಗುಡ್ಡದ ಮಣ್ಣು ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ನೋಡಿ ತೆರಳಿದ್ದಾರೆ. ಇದನ್ನು ದೂರದಿಂದಲೇ ವೀಕ್ಷಣೆ ಮಾಡಿ ಸಚಿವೆ ಹೋಗಿದ್ದು, ಈ ಕುರಿತು ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ. ಸಚಿವರು ಏನು ಬೀಚ್ ನೋಡಕೆ ಬಂದ್ರಾ ಅಥವಾ ಗುಡ್ಡ ನೋಡಲು ಬಂದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ದಿನಗಳಿಂದ ಸಮಸ್ಯೆಯಿದೆ. ರಸ್ತೆ, ಖಾಸಗಿ ರೆಸಾರ್ಟ್‌ಗಳ ನಿರ್ಮಾಣದಿಂದ ಈ ಸಮಸ್ಯೆ ಉದ್ಬವಿಸಿದೆ. ಕಡಲ ಕೊರೆತದ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸ್ಥಳದಲ್ಲಿ ಪರಿಶಿಷ್ಟ ಜಾತಿಯ ಮನೆಗಳಿದೆ. ಉಡುಪಿಯಲ್ಲೆ ಸಚಿವರು ಇದ್ದು, ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕೆಂದು ಜನರು ಒತ್ತಾಯಿಸಿದರು.
ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ನಾನು ಇಲ್ಲಿಯೇ ಮನೆ ಮಾಡಿ ಇರಲು ತಯಾರಿದ್ದೇನೆ. ನನಗೂ ಜವಾಬ್ದಾರಿಯಿದೆ, ಅಧಿವೇಷನ ನಡೆಯುತ್ತಿದೆ. ಭಾನುವಾರ ರಜೆ ಇದ್ದಾಗಲೂ ಬಂದಿದ್ದೇನೆ. ನನ್ನ ಅವಶ್ಯಕತೆಯಿದ್ದಾಗ ಇಲ್ಲಿಗೆ ಬರುತ್ತೇನೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚರವಾಗಿಯೇ ಇದೆ. ಪರಿಹಾರ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.