ಒಬ್ಬ ಮಗು ಸರಿಯಾದ ಅಂಕಗಳನ್ನು ಪಡೆದಿಲ್ಲ ಅಂದರೇ ಅದು ಮಗುವಿನ ತಪ್ಪಲ್ಲ, ಬದಲಿಗೆ ಶಿಕ್ಷಕನ ತಪ್ಪಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಲ್ಲಾ ಮಕ್ಕಳೂ ಒಳ್ಳೆಯ ವಿದ್ಯೆಯನ್ನು ಪಡೆಯುವಂತೆ ಮಾಡುವುದು (Local News) ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ ಎಂದು ನಿವೃತ್ತ ಬಿಇಒ ರಘುನಾಥರೆಡ್ಡಿ ತಿಳಿಸಿದರು.
ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜಿ.ನಾಗೇಶ್ ಹಾಗೂ ಜವೆರಿಯಾ ಫಿರ್ದೋಸ್ ರವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ (Local News) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಈ ಭಾಗದಲ್ಲಿ ಹಲವು ವರ್ಷಗಳ ಕಾಲ ಬಿಇಒ ಆಗಿ ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಒಳ್ಳೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಅವರನ್ನು ತಿದ್ದಿ ತೀಡುವಂತಹ ಕೆಲಸ ಶಿಕ್ಷಕರು ಮಾಡಬೇಕು. ಯಾವುದೇ ಒಬ್ಬ ವಿದ್ಯಾರ್ಥಿ ಕಡಿಮೆ ಅಂಕ ಅಥವಾ ಫೇಲ್ ಆಗಿದ್ದಾನೆ ಎಂದರೇ ಅದರ ಜವಾಬ್ದಾರಿ ಶಿಕ್ಷಕ ಹೊರಬೇಕಾಗುತ್ತದೆ. ನಾವು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಿದಾಗ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗುವುದರ ಜೊತೆಗೆ ವಿದ್ಯಾವಂತರಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕ ಮುಂದಾಗಬೇಕು. ಇದೀಗ ವರ್ಗಾವಣೆಗೊಂಡ ಶಿಕ್ಷಕ ನಾಗೇಶ್ ಸುಮಾರು ವರ್ಷಗಳಿಂದ ಶಿಕ್ಷಕನಾಗಿ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾನೆ. ಅವರ ಕಾರ್ಯಪ್ರವೃತ್ತಿ, ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ ಬೇರೆ ಶಿಕ್ಷಕರಿಗೂ ಮಾದರಿಯಾಗಲಿ ಎಂದರು.
ಬಳಿಕ ಪೇರೆಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್.ಜಗದೀಶ್ ರೆಡ್ಡಿ ಮಾತನಾಡಿ, ಇಂದಿನ ಮಕ್ಕಳಿಗೆ ಶಿಸ್ತು-ಸಂಯಮ ಕಲಿಸಿಕೊಡಬೇಕು. ಬಾಲ್ಯದಿಂದಲೇ ಮಕ್ಕಳು ತಮ್ಮ ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಂಡಾಗ ಒಳ್ಳೆಯ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಕ ನಾಗೇಶ್ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಿಕೊಟ್ಟಿದ್ದಾರೆ. ಅವರನ್ನು ಈ ಶಾಲೆಯ ಮಕ್ಕಳು ಕಳೆದುಕೊಂಡಂತಾಗಿದೆ. ಆದರೂ ಅವರು ನಮ್ಮ ಜಿಲ್ಲೆಯಲ್ಲೇ ಸೇವೆ ಸಲ್ಲಿಸಲಿದ್ದು, ಆ ಭಾಗದ ಮಕ್ಕಳಿಗೂ ಅನುಕೂಲವಾಗಲಿದೆ. ಜೊತೆಗೆ ಮಕ್ಕಳು ಮೊಬೈಲ್, ಇಂಟರ್ ನೆಟ್, ಟಿವಿಗಳಿಂದ ದೂರವಿರಬೇಕು. ಅವುಗಳಿಂದ ತಮ್ಮ ಶಿಕ್ಷಣಕ್ಕೆ ಉಪಯುಕ್ತವಾಗುವಂತಹ ವಿಚಾರಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಓದಿದರೇ ಮುಂದಿನ ದಿನಗಳಲ್ಲಿ ತಾವುಗಳು ಒಳ್ಳೆಯ ಹುದ್ದೆಗಳನ್ನು ಅಲಂಕರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜಿ.ನಾಗೇಶ್ ಹಾಗೂ ಜವೆರಿಯಾ ಫಿರ್ದೋಸ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಮಯದಲ್ಲಿ ಸೋಮೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಮಂಗಳಮ್ಮ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಇಸಿಒ ರಾಘವೇಂದ್ರ, ಸೋಮೇನಹಳ್ಳಿ ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ, ಜಿಪಿಟಿ ಶಿಕ್ಷಕರ ಸಂಘದ ರಾಜಶೇಖರ್, ಮುರಳಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಬಿ.ಆರ್.ಪಿ, ಸಿ.ಆರ್.ಪಿ ಗಳು, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.