ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯ ಆದರ್ಶ ವಿದ್ಯಾಲಯದಲ್ಲಿ ನಿರ್ಮಾಣ ಮಾಡಿರುವ ಕ್ರೀಡಾಂಗಣ ಉತ್ತಮವಾಗಿದ್ದು, ಮುಂದಿನ ವರ್ಷದೊಳಗೆ ಈ ಕ್ರಿಡಾಂಗಣವನ್ನು ಉನ್ನತೀಕರಣಗೊಳಿಸಿ ಕಾಂಪೌಂಡ್ ಸೇರಿದಂತೆ ಮತಷ್ಟು ಸೌಕರ್ಯಗಳನ್ನು ಒದಗಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ (Local News) ತಾಲೂಕಿನ ಆದರ್ಶ ವಿದ್ಯಾಲಯದ ನೂತನ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಆದರ್ಶ ವಿದ್ಯಾಲಯದಲ್ಲಿ ನಿರ್ಮಾಣವಾದ ಕ್ರೀಡಾಂಗಣ ಉತ್ತಮವಾಗಿದೆ. ಇಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಹ ನಡೆಸಬಹುದು. ಈ ಕ್ರೀಡಾಂಗಣದಲ್ಲಿ ಇನ್ನೂ ಕಾಂಪೌಂಡ್ ಸೇರಿದಂತೆ ಹಲವು ಕೆಲಸಗಳು ಬಾಕಿಯಿದ್ದು, ಮುಂದಿನ ವರ್ಷದೊಳಗೆ ಎಲ್ಲವನ್ನೂ ಪೂರ್ಣಗೊಳಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿಸುತ್ತೇನೆ. ಕ್ರೀಡಾಂಗಣ ನಿರ್ಮಾಣದ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದಿದೆ. ಅಭಿವೃದ್ದಿಯ ವಿಚಾರದಲ್ಲಿ ಯಾರೂ ಸಹ ಅಡ್ಡಿ ಮಾಡಬಾರದು ಎಂದರು.
ಇನ್ನೂ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಬೇಕು. ಪಠ್ಯದ ಜೊತೆಗೆ ಕ್ರೀಡೆಗಳೂ ಸಹ ತುಂಬಾನೆ ಪ್ರಾಮುಖ್ಯತೆ ಹೊಂದಿದೆ. ಇಂದು ಅನೇಕರು ಕ್ರೀಡಾ ಕೋಟಾದಿಂದ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಅದೇ ರೀತಿ ತಾವುಗಳು ಸಹ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಗುಡಿಬಂಡೆ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು. ಅದೇ ರೀತಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.