Local News : ರೈತರು ಹಾಗೂ ಸೈನಿಕರು ಈ ದೇಶದ ಆಸ್ತಿಯಾಗಿದ್ದು ಅವರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ, ಸೈನಿಕರು ಮೃತ ಪಟ್ಟಲ್ಲಿ ಅವರ ಮಕ್ಕಳು ಯಾವ ಶಿಕ್ಷಣ ಪಡೆಯುತ್ತಿರುತ್ತಾರೋ ಆ ಶಿಕ್ಷಣದಲ್ಲಿ ಒಂದಿಷ್ಟು ಮೀಸಲಾತಿ ನೀಡಬೇಕು ಆ ಮೂಲಕ ಅವರು ಮಾಡಿದ ಸೇವೆಗೆ ಬೆಲೆ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್. ಚೊಕ್ಕನಹಳ್ಳಿ, ಕಾರಕಮಾಕಲಹಳ್ಳಿ ಹಾಗೂ ಬೊಮ್ಮಗಾನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿದ್ದ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮವನ್ನು ಉದ್ದೇಶಿಸಿ ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಸೈನಿಕರ ಕುಟುಂಬದಲ್ಲಿ ಅವರ ಮಕ್ಕಳು ಯಾವ ಕೋರ್ಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೋ ಅದರಲ್ಲಿ ಅವರಿಗೆ ಮೀಸಲಾತಿ ನೀಡಬೇಕು, ಸೈನಿಕರ ಕೋಟಾದಲ್ಲಿ ಶೇ.5% ರಷ್ಟು ಮೀಸಲಾತಿ ನೀಡುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದರು. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಕುರಿತು ಮಾತನಾಡಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಿರಿ, ನಕಲು ಮಾಡಿ ಪ್ರಥಮ ಸ್ಥಾನ ಪಡೆಯುವುದು ಬೇಕಾಗಿಲ್ಲ, ತಾಲೂಕಿನಲ್ಲಿ ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ 10ನೇ ತರಗಟು ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ಸುಮಾರು 64 ಸರಣಿ ಪರೀಕ್ಷೆಗಳನ್ನು ನಡೆಸಲಾಗಿದ್ದು ಪರೀಕ್ಷೆ ಪ್ರಾರಂಭವಾಗುವ ತನಕ ಸರಣಿ ಪರೀಕ್ಷೆಗಳು ನಡೆಯಲಿವೆ ಈ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಗೊಳಿಸಲಾಗುತ್ತಿದೆ ಎಂದರು.
ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ಹಾದು ಹೋಗಿರುವ ಗುಡಿಬಂಡೆ ಪೆರೇಸಂದ್ರ ಜಿಲ್ಲಾ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಚರಂಡಿಗಳನ್ನು ನಿರ್ಮಾಣ ಮಾಡದೇ, ಅವೈಜ್ಞಾನಿಕವಾಗಿ ಮೂರರಿಂದ ನಾಲ್ಕು ಅಡಿ ಮೇಲಕ್ಕೆ ಎತ್ತರಿಸಿದ್ದು ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ಚರಂಡಿಗಳನ್ನು ನಿರ್ಮಿಸಿ ಎಂದು ಸಾರ್ವಜನಿಕರು ದೂರು ಸಲ್ಲಿಸಿದರು, ಉಳಿದಂತೆ ಗಂಗಾಕಲ್ಯಾಣ ಯೋಜನೆಗಾಗಿ 15 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದರು ಸಹ ಮಂಜೂರು ಮಾಡಿಲ್ಲ, ಬಗರ್ ಹುಕಂ ಯೋಜನೆಯಡಿಯಲ್ಲಿ ಭೂಮಿ ಮಂಜೂರು ಮಾಡುವುದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ರೈತರಿಗೆ ಸಮಸ್ಯೆ ಆಗಿದ್ದು ನಕಾಶೆಯಲ್ಲಿರುವ ಕಾಲು ದಾರಿಯನ್ನು ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದರು.

ಸಮಸ್ಯೆಗಳ ಅನಾವರಣ: ಶಾಸಕರು ಹಾಗೂ ಅಧಿಕಾರಿಗಳ ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳ ಅನಾವರಣವಾಗಿದ್ದು, ನೂರಾರು ಅರ್ಜಿಗಳನ್ನು ಹೊತ್ತು ತಂದ ಸಾರ್ವಜನಿಕರಿಗೆ ಭರಪೂರ ಬರವಸೆಗಳನ್ನು ನೀಡುವ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮತ್ತೊಮ್ಮೆ ಅರ್ಜಿ ಹಿಡಿದು ಕಚೇರಿಗೆ ಆಗಮಿಸುವಂತೆ ಸೂಚನೆ ಮಾಡಿದರಾದರೂ ಯಾವುದೇ ಅರ್ಜಿಗೂ ಸ್ಥಳದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗಲಿಲ್ಲ.
ಯಾವ ಸಮಸ್ಯೆಗಳಿಗೆ ಹೆಚ್ಚು ಅರ್ಜಿ: ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ, ಬಗರ್ ಹುಕಂ, ನಿವೇಶನ, ವಸತಿ, ಪಡಿತರ, ವಿಧವಾ ಹಾಗೂ ವೃದ್ದಾಪ್ಯ ವೇತನ,ಚರಂಡಿಗಳ ನಿರ್ಮಾಣ, ಸಿಸಿ ರಸ್ತೆಗಳ ನಿರ್ಮಾಣ, ಒತ್ತುವರಿಯಾಗಿರುವ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಅರ್ಜಿಗಳನ್ನು ಸಲ್ಲಿಸಿದ್ದು, ಸಮಸ್ಯೆ ನಿವಾರಿಸುವಂತೆ ಶಾಸಕರು ಸ್ಥಳದಲ್ಲಿದ್ದ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರಿಂದ ಸಿಕ್ಕ ಭರವಸೆಗಳು : ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ 6 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಜೆಜೆಎಂ ಯೋಜನೆಯಲ್ಲಿ ಓವರ್ ಹೆಡ್ ಟ್ಯಾಂಕ್, 30 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಚರಂಡಿಗಳ ಹಾಗೂ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿ ಮುಂದಿನ 15 ದಿನಗಳಲ್ಲಿ ಗುದ್ದಲಿ ಪೂಜೆ ಮಾಡುತ್ತೇನೆ ಎಂದರು. ಕರಕಮಾಕಲಹಳ್ಳಿ ಗ್ರಾಮದಲ್ಲಿ ಹಲವು ಮಹಿಳೆಯರು ಗುಡಿಸಲು ಮನೆಗಳಲ್ಲಿ ವಾಸ ಮಾಡುತ್ತ ಹಾಗೂ ನಿವೇಶನಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು, ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು ಎಂದರು.