ಜೀತದಾಳುಗಳಲ್ಲಿ ಬಹುತೇಕರು ಅನಕ್ಷರಸ್ಥರೇ ಆಗಿರುವುದರಿಂದ ಅವರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಜೊತೆಗೆ ಅವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಜೀವಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಜೀತ ಪದ್ದತಿ ರದ್ದತಿ ಕಾನೂನು ಜಾರಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಬಹುತೇಕ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರು ಜೀತಕ್ಕೆ ಇರುತ್ತಾರೆ. ನಾವು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ಮಾಡಿ ಜೀತಕ್ಕೆ ಇರುವಂತವರನ್ನು ಗುರುತಿಸಿ ಅವರನ್ನು ಜೀತದಿಂದ ಬಿಡುಗಡೆ ಮಾಡಿಸುವಂತಹ ಕೆಲಸ ನಾವು ಮಾಡಿದ್ದೇವೆ. ಬಿಡುಗಡೆಯಾದಂತವರಿಗೆ ಸರ್ಕಾರ ಸರಿಯಾಗಿ ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯವನ್ನು ಮಾಡುತ್ತಿದೆ. ಅವರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತಂದು ಮನುಷ್ಯರಂತೆ ಕಾಣಬೇಕಾಗಿದೆ ಎಂದು ಹೇಳಿದರು.
ಬಳಿಕ ಜೀವಿಕ ಸಂಘಟನೆಯ ಚನ್ನರಾಯಪ್ಪ ಮಾತನಾಡಿ ಈ ಪ್ರಸ್ತುತ ಕಾಲದಲ್ಲಿ ಅನೇಕ ಯುವಜನರು ಗುತ್ತಿಗೆ ಆಧಾರದಲ್ಲಿ ಇನ್ನೊಂದು ರೀತಿಯಲ್ಲಿ ಜೀತವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಬಡಜನರಿಗೆ ನ್ಯಾಯ ಸಿಗಬೇಕಾದರೆ ಹೋರಾಟಗಳ ಮೂಲಕ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ ಜೊತೆಗೆ ಡಾ.ಅಂಬೇಡ್ಕರ್ ರವರ ಪುಸ್ತಕಗಳನ್ನು ಓದಬೇಕಾಗಿದೆ. ಸರ್ಕಾರಗಳು ಜೀತದಾಳುಗಳಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗಬೇಕು ಎಂದು ತಿಳಿಸಿದರು.
ಈ ವೇಳೆ ದಲಿತ ಸಂಘಟನೆಯ ಮುಖಂಡರಾದ ಕೆಎನ್ ನರಸಿಂಹಪ್ಪರವರು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಜೀತಗಾರರನ್ನು ಜಾಗೃತಿ ಮೂಡಿಸಿದರು. ಈ ಸಮಯದಲ್ಲಿ ಜೀವಿಕ ಸಂಘಟನೆ ಬಾಗೇಪಲ್ಲಿ ನಾರಾಯಣಸ್ವಾಮಿ, ಅಮರಾವತಿ, ದಲಿತ ಮುಖಂಡ ಗಂಗಪ್ಪ, ಕೋರೇನಹಳ್ಳಿ ನರಸಿಂಹಪ್ಪ, ಕದಿರಪ್ಪ ಸೇರಿದಂತೆ ಹಲವರಿದ್ದರು.